ADVERTISEMENT

ಬಿಹಾರ ಚುನಾವಣೆ | NDA ಜೊತೆ ಮಾತುಕತೆ ವಿಫಲವಾದರೆ ಸ್ವತಂತ್ರವಾಗಿ ಕಣಕ್ಕೆ: SBSP

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:46 IST
Last Updated 2 ಆಗಸ್ಟ್ 2025, 5:46 IST
<div class="paragraphs"><p>ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ&nbsp;ಓಂ ಪ್ರಕಾಶ್&nbsp;ರಾಜಭರ್</p></div>

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಓಂ ಪ್ರಕಾಶ್ ರಾಜಭರ್

   

ಪಿಟಿಐ ಚಿತ್ರ

ಬಲ್ಲಿಯಾ (ಉತ್ತರ ಪ್ರದೇಶ): ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದೊಂದಿಗೆ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗದಿದ್ದರೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆಗೆ ಸಿದ್ಧವಿರುವುದಾಗಿ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಉತ್ತರ ಪ್ರದೇಶ ಪಂಚಾಯತ್ ರಾಜ್‌ ಸಚಿವರೂ ಆಗಿರುವ ರಾಜಭರ್‌, ಬಲ್ಲಿಯಾ ಜಿಲ್ಲೆಯ ರಾಸ್ರಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಸಂಜೆ ಮಾತನಾಡಿದ್ದಾರೆ. 'ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುವುದು ನಮ್ಮ ಮೊದಲ ಆಯ್ಕೆಯಾಗಿದೆ. ಚುನಾವಣೆ ಸಂಬಂಧದ ಚರ್ಚೆಯು ಶೇ 70ರಷ್ಟು ಅಂತಿಮಗೊಂಡಿದೆ' ಎಂದಿದ್ದಾರೆ.

'ಆದಾಗ್ಯೂ, ನಾವು ಎರಡನೇ ಆಯ್ಕೆಗೂ ಸಜ್ಜಾಗುತ್ತಿದ್ದೇವೆ. ಒಂದು ವೇಳೆ, ಬಿಹಾರ ನಾಯಕರಿಂದ ಒತ್ತಡ ಬಂದು, ಒಪ್ಪಂದ ಸಾಧ್ಯವಾಗಿದ್ದರೆ ಸ್ವತಂತ್ರವಾಗಿ ಕಣಕ್ಕಿಳಿಯಲು ಸಂಪೂರ್ಣವಾಗಿ ಸಿದ್ಧರಿದ್ದೇವೆ' ಎಂದು ತಿಳಿಸಿದ್ದಾರೆ.

ಇದೇ ವೇಳೆ ಅವರು, ತಮ್ಮ ಪಕ್ಷವು ವಿರೋಧ ಪಕ್ಷಗಳ 'ಇಂಡಿಯಾ ಮೈತ್ರಿಕೂಟ' ಸೇರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

'ಇಂಡಿಯಾ ಮೈತ್ರಿಕೂಟದ ಹೊರಗೂ ಹಲವು ಪಕ್ಷಗಳು ಸಕ್ರಿಯವಾಗಿವೆ. ಆ ಪೈಕಿ ಕೆಲವು ಪಕ್ಷಗಳೊಂದಿಗೆ ಮಾತುಕತೆ ನಡೆಯುತ್ತಿದೆ. ಬಿಜೆಪಿ ಜೊತೆ ಮಾತುಕತೆ ಯಶಸ್ವಿಯಾಗದಿದ್ದರೆ, ಪ್ರತ್ಯೇಕ ರಂಗ ರಚಿಸಿ ಚುನಾವಣೆಗಿಳಿಯುತ್ತೇವೆ. 156 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ' ಎಂದಿದ್ದಾರೆ.

'ರಾಹುಲ್ ದಾಖಲೆಗಳನ್ನು ನೀಡಲಿ'
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಕಿಡಿಕಾರಿರುವ ರಾಜಭರ್‌, 'ಅವರು ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲ, ಭಾರತದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಾರೆ. ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸುತ್ತಾರೆ. ಆದರೆ, ಅವರ ಪಕ್ಷ ಚುನಾವಣೆಗಳಲ್ಲಿ ಗೆದ್ದರೆ, ಯಾವುದೇ ಕಳವಳ ವ್ಯಕ್ತಪಡಿಸುವುದಿಲ್ಲ. ಚುನಾವಣೆಗಳಲ್ಲಿ ಅಕ್ರಮ ನಡೆದಿದೆ, ಫಲಿತಾಂಶ ತಿರುಚಲಾಗಿದೆ ಎಂದು ಅವರು ನಂಬಿದ್ದರೆ, ಅದನ್ನು ಬಹಿರಂಗಪಡಿಸಲಿ. ದಾಖಲೆಗಳನ್ನು ಒದಗಿಸಲಿ' ಎಂದು ಸವಾಲು ಹಾಕಿದ್ದಾರೆ.

ರಾಹುಲ್‌ ಅವರಿಗೆ, ಬಿಹಾರ ಚುನಾವಣೆಯಲ್ಲಿ ಮುಗ್ಗರಿಸುವ ಸುಳಿವು ಸಿಕ್ಕಿದೆ. ಹಾಗಾಗಿಯೇ ಅವರು ಆಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೂ ಕುಟುಕಿದ್ದಾರೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.