ADVERTISEMENT

Bihar Polls | ಮಹಿಳೆಯರಿಗೆ ಹಣ ವರ್ಗಾವಣೆ: ಬಿಹಾರ ಸರ್ಕಾರದ ವಿರುದ್ಧ RJD ದೂರು

ಪಿಟಿಐ
Published 1 ನವೆಂಬರ್ 2025, 15:30 IST
Last Updated 1 ನವೆಂಬರ್ 2025, 15:30 IST
<div class="paragraphs"><p>ತೇಜಸ್ವಿ ಯಾದವ್ (ಸಂಗ್ರಹ ಚಿತ್ರ)&nbsp;</p></div>

ತೇಜಸ್ವಿ ಯಾದವ್ (ಸಂಗ್ರಹ ಚಿತ್ರ) 

   ಪಿಟಿಐ ಚಿತ್ರ

ವದೆಹಲಿ/ಗೋಪಾಲಗಂಜ್‌/ಸಿವಾನ್‌/ಬೇಗುಸರಾಯ್‌: ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆ’ ಅಡಿಯಲ್ಲಿ ಬಿಹಾರ ಸರ್ಕಾರವು ಅ.7, 24 ಮತ್ತು 31ರಂದು ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಆರ್‌ಜೆಡಿ ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಅ.6ರಿಂದ ಬಿಹಾರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆರ್‌ಜೆಡಿ ಸಂಸದ ಮನೋಜ್‌ ಝಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ‘ಎರಡನೇ ಹಂತದ ಮತದಾನಕ್ಕೂ ನಾಲ್ಕು ದಿನ ಮುಂಚಿತವಾಗಿ ನ. 7ರಂದು ಮತ್ತೊಂದು ಕಂತಿನ ಹಣ ವರ್ಗಾವಣೆ ಆಗಲಿದೆ’ ಎಂದಿದ್ದಾರೆ.

ADVERTISEMENT

‘ಒಂದೆಡೆ ನೀತಿ ಸಂಹಿತೆ ಜಾರಿಯಲ್ಲಿದೆ, ಇನ್ನೊಂದೆಡೆ ಮತದಾನದ ದಿನಾಂಕವು ಹತ್ತಿರದಲ್ಲಿದೆ. ಇಂಥ ಸಮಯದಲ್ಲಿ ಹಣ ವರ್ಗಾವಣೆ ಮಾಡಲಾಗಿದೆ. ಇದು ಮತದಾರರನ್ನು ಸೆಳೆಯಲು ಮಾಡಿದ ವ್ಯವಸ್ಥಿತ ಯತ್ನ. ನೀತಿ ಸಂಹಿತೆ ಇರುವುದು ಪಕ್ಷಗಳಿಗೆ ಸಮಾನ ಅವಕಾಶ ಸಿಗುವುದಕ್ಕಾಗಿ. ಆದರೆ, ಇಲ್ಲಿ ಸಮಾನ ಅವಕಾಶವೇ ಇಲ್ಲದಂತಾಗಿದೆ’ ಎಂದರು.

‘ಆಯೋಗವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ನೀತಿ ಸಂಹಿತೆ ಪಾಲಿಸುವುದು ಮತ್ತು ಯಾವುದೇ ಹಂತದಲ್ಲಿಯೂ ನ್ಯಾಯಸಮ್ಮತ ಚುನಾವಣೆ ನಡೆಯುವುದು ಸಾಂವಿಧಾನಿಕವಾದ ಕಡ್ಡಾಯ ಎಂಬುದನ್ನು ತೋರಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಹೆಲಿಕಾಪ್ಟರ್‌ ಹಾರಾಟ ರದ್ದು: ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ಮಳೆ ಸುರಿಯುತ್ತಿರುವುದರಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಸುಮಾರು 22 ಹೆಲಿಕಾಪ್ಟರ್‌ಗಳ ಹಾರಾಟಗಳನ್ನು ರದ್ದು ಮಾಡಲಾಗಿದೆ. ಮೊದಲ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರವು ನ.4ರಂದು ಅಂತ್ಯಗೊಳ್ಳಲಿದೆ.

‘ಆರ್‌ಜೆಡಿಗೆ ಮತ ನೀಡಿದರೆ ‘ಜಂಗಲ್‌ ರಾಜ್‌’ ಆರಂಭ’

‘ಆರ್‌ಜೆಡಿಗೆ ಮತ ಹಾಕಿದರೆ ಬಿಹಾರದಲ್ಲಿ ಮತ್ತೊಮ್ಮೆ ‘ಜಂಗಲ್‌ ರಾಜ್‌’ ಆರಂಭವಾಗುತ್ತದೆ. ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಸಹೋದರ, ಗೋಪಾಲ್‌ಗಂಜ್‌ ಕ್ಷೇತ್ರದ ಮಾಜಿ ಸಂಸದ ಸಾಧು ಯಾದವ್‌ ಅವರ ಆಟಾಟೋಪಗಳನ್ನು ನೆನಪಿಸಿಕೊಳ್ಳಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಹೇಳಿದರು.

‘ಬಿಹಾರದ ಭವಿಷ್ಯವನ್ನು ಯಾರ ಕೈಗೆ ನೀಡಬೇಕು ಎಂದು ನಿರ್ಧರಿಸುವ ಅವಕಾಶವಿದು. ಒಂದು ಕಡೆ ‘ಜಂಗಲ್‌ ರಾಜ್‌’ ಅನ್ನು ಉಣಬಡಿಸಿದವರು. ಇನ್ನೊಂದು ಕಡೆ, ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿಪಡಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌’ ಎಂದರು.

ಅಮಿತ್‌ ಶಾ ಅವರು ಗೋಪಾಲ್‌ಗಂಜ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು. ರಾಬ್ಡಿ ದೇವಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಧು ಯಾದವ್‌ ಅವರ ಮೇಲೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಲವು ಆರೋಪಗಳಿದ್ದವು.

ಬಿಹಾರದಲ್ಲಿ ಮತ್ತೊಮ್ಮೆ ‘ಜಂಗಲ್‌ ರಾಜ್‌’ ಆರಂಭಿಸಲು ಆರ್‌ಜೆಡಿ ಬಯಸುತ್ತಿದೆ. ಒಂದು ಕಾಲದಲ್ಲಿ ಗ್ಯಾಂಗ್‌ಸ್ಟರ್‌ ಆಗಿ, ಬಳಿಕ ರಾಜಕಾರಣಯಾಗಿದ್ದ ಮೊಹಮ್ಮದ್‌ ಶಹಬುದ್ದೀನ್‌ ಅವರ ಮಗನಿಗೆ ಆರ್‌ಜೆಡಿ ಟಿಕೆಟ್‌ ನೀಡಿದೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು. 

ದಂಧೆ ನಡೆಸುವ ಸ್ಥಳ: ನಡ್ಡಾ ಅವರು ಸಿವಾನ್‌ನಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಚಾರ ಸಭೆಯಲ್ಲಿ ಭಾಗವಹಿಸಿದರು. ‘ಜಂಗಲ್‌ ರಾಜ್‌ ಕಾಲದಲ್ಲಿ ಅಪಹರಣ ಎನ್ನುವುದು ದೊಡ್ಡ ಉದ್ಯಮವಾಗಿತ್ತು. ಮುಖ್ಯಮಂತ್ರಿ ನಿವಾಸವು ವಸೂಲಿ ದಂಧೆ ನಡೆಸುವ ಸ್ಥಳವಾಗಿತ್ತು’ ಎಂದು ಆರೋಪಿಸಿದರು.

‘ಶಹಬುದ್ದೀನ್‌ ಅವರ ಕೃತ್ಯಗಳನ್ನು ಸಿವಾನ್‌ ನೋಡಿದೆ. ಈಗ ಇದೇ ಕ್ಷೇತ್ರದಲ್ಲಿ ಅವರ ಮಗನಿಗೆ ಟಿಕೆಟ್‌ ನೀಡಲಾಗಿದೆ’ ಎಂದರು.

‘ದೆಹಲಿ ನಿಯಂತ್ರಿತ’

‘ಬಿಹಾರದಲ್ಲಿ ಡಬಲ್‌ ಇಂಜಿನ್‌ ಸರ್ಕಾರವಿಲ್ಲ. ಇಲ್ಲಿ ಎಲ್ಲವೂ ದೆಹಲಿಯಿಂದ ನಿಯಂತ್ರಣವಾಗುತ್ತಿದೆ. ಇಲ್ಲಿ ನಿಮ್ಮ ಕಷ್ಟಗಳನ್ನೂ ಕೇಳುವವರಿಲ್ಲ ಯಾರೂ ಇಲ್ಲ. ನಿಮ್ಮ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರನ್ನು ಗೌರವಿಸುವವರೂ ಇಲ್ಲ’ ಎಂದು ಕಾಂಗ್ರೆಸ್‌ ಸಂಸದೆ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದರು.

ಬೇಗುಸರಾಯ್‌ನಿಂದ ಪ್ರಿಯಾಂಕ ಅವರು ಈ ಬಾರಿಯ ತಮ್ಮ ಪ್ರಚಾರವನ್ನು ಆರಂಭಿಸಿದರು. ‘ಅವರು ಮೊದಲು ಜನರನ್ನು ವಿಭಜಿಸಿದರು. ಯುದ್ಧ ಬಯಸಿದರು. ಆದರೆ, ನೈಜ ವಿಚಾರಗಳಿಂದ ಜನರನ್ನು ಬೇರೆಡೆ ಸೆಳೆಯಲು ಆಗಲಿಲ್ಲ. ಅದಕ್ಕಾಗಿ ಮತಗಳ್ಳತನಕ್ಕೆ ಇಳಿದರು’ ಎಂದರು.

ನಾನು ಹಿಂದಿನದರ ಬಗ್ಗೆಯೇ ಪ್ರಶ್ನಿಸುತ್ತೇನೆ. ಯಾರು ಕಾರ್ಖಾನೆಗಳನ್ನು, ಐಐಟಿ– ಐಐಎಂಗಳನ್ನು ಸ್ಥಾಪಿಸಿದರು. ಇದಕ್ಕೆ ಉತ್ತರ ಕಾಂಗ್ರೆಸ್‌ ಮತ್ತು ನೆಹರೂ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.