ಅಮಿತ್ ಶಾ, ನಿತೀಶ್ ಕುಮಾರ್, ರಾಹುಲ್ ಗಾಂಧಿ, ಚಿರಾಗ್ ಪಾಸ್ವಾನ್ ಹಾಗೂ ತೇಜಸ್ವಿ ಯಾದವ್
ಪಿಟಿಐ ಚಿತ್ರಗಳು
ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಎನ್‌ಡಿಎ ಮಿತ್ರಪಕ್ಷಗಳು ಹಾಗೂ ಮಹಾಘಟಬಂಧನ್ ಮೈತ್ರಿಕೂಟವು 'ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ' ಎಂಬುದನ್ನು ಪುನರುಚ್ಚರಿಸುತ್ತಿವೆ. ಆದರೆ, ಸೀಟು ಹಂಚಿಕೆಯು ಎರಡೂ ಬಣಗಳಿಗೆ ನಿರ್ಣಾಯಕವಾಗಲಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿರುವ ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಮತ್ತು ರಾಷ್ಟ್ರ ರಾಜಕಾರಣದ ಬದಲು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ, ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಅವರ ಪಕ್ಷ ಹಾಕುತ್ತಾ ಬಂದಿದೆ.
ಇದು ಎನ್‌ಡಿಎ ಮೈತ್ರಿಕೂಟದ ಮುಂದಾಳು ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬುದನ್ನು ಅರಿತಿರುವ ಚಿರಾಗ್, 'ವಿಧಾನಸಭೆ ಚುನಾವಣೆಯು ನಿತೀಶ್ ಕುಮಾರ್ ನಾಯಕತ್ವದಲ್ಲೇ ನಡೆಯಲಿದೆ. ಹಾಗೆಯೇ, ತಾವು ಮುಖ್ಯಮಂತ್ರಿ ಕುರ್ಚಿ ಆಕಾಂಕ್ಷಿಯಲ್ಲ ಎಂಬ ಭರವಸೆಯನ್ನು ಭಾನುವಾರ ನೀಡಿದ್ದಾರೆ.
'ಚಿರಾಗ್ ಭವಿಷ್ಯದ ಮುಖ್ಯಮಂತ್ರಿ' ಎಂಬ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿರುವುದು ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಿಗಾಗಿ ಚೌಕಾಶಿ ನಡೆಸಲು ಮಾಡುತ್ತಿರುವ ತಂತ್ರವಾಗಿದೆ ಎಂದು ಆಡಳಿತಾರೂಢ ಜೆಡಿ(ಯು) ಮೂಲಗಳು ತಿಳಿಸಿವೆ. 243 ಸ್ಥಾನಗಳ ಪೈಕಿ 40ಕ್ಕಿಂತ ಕಡಿಮೆ ಸೀಟುಗಳನ್ನು ನೀಡುವುದಾದರೆ ಒಪ್ಪುವುದಿಲ್ಲ ಎಂದು ಚಿರಾಗ್ ಅವರು ಈಗಾಗಲೇ ಹೇಳಿದ್ದಾರೆ.
ಅದೇರೀತಿ ಜೀತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಮ್) ಪಕ್ಷವೂ, ಚಿರಾಗ್ ಅವರ ಎಲ್‌ಜೆಪಿ ಕಣಕ್ಕಿಳಿಯುವಷ್ಟೇ ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವ ಇರಾದೆಯಲ್ಲಿದೆ.
'ಸೀಟು ಹಂಚಿಕೆ ಕುರಿತ ಮಾತುಕತೆಯು ಜೆಡಿ(ಯು) ಮತ್ತು ಬಿಜೆಪಿ ನಾಯಕರ ನಡುವೆಯೇ ಅಂತಿಮಗೊಳ್ಳಲಿದೆ' ಎಂಬುದಾಗಿ ಎನ್‌ಡಿಎ ಮೈತ್ರಿಕೂಟದ ಉನ್ನತ ಮೂಲಗಳು ತಿಳಿಸಿವೆ.
'ಜೆಡಿ(ಯು) 102 ಕಡೆ ಮತ್ತು ಬಿಜೆಪಿ 101 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ. ಮಿತ್ರ ಪಕ್ಷಗಳಾದ ಎಲ್‌ಜೆಪಿ, ಎಚ್‌ಎಎಂ ಹಾಗೂ ಉಪೇಂದ್ರ ಯಾದವ್ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಪಕ್ಷಗಳಿಗೆ ಉಳಿದ 40 ಸ್ಥಾನಗಳು ಹಂಚಿಕೆಯಾಗಲಿವೆ. ಹಿಂದಿನ ಚುನಾವಣೆಗಳ ಗೆಲುವಿನ ದರದ ಆಧಾರದಲ್ಲಿ ಎಲ್‌ಜೆಪಿಯು 25 ಸೀಟುಗಳನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ' ಎಂದು ಹೆಸರು ಬಹಿರಂಗಪಡಿಸಿದಂತೆ ಷರತ್ತಿನ ಮೇರೆಗೆ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಬಿಹಾರದಲ್ಲಿ 'ಮಹಾ ಮೈತ್ರಿ' ಎನಿಸಿರುವ ಮಹಾಘಟಬಂಧನ್‌ನಲ್ಲಿಯೂ ಇದೇ ಪರಿಸ್ಥಿತಿ ಇದೆ. ಮಾಜಿ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪ್ರಮುಖ ವಿರೋಧ ಪಕ್ಷವಾಗಿರುವ ಆರ್‌ಜೆಡಿ 140 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮತ್ತು ಉಳಿದ 103 ಸ್ಥಾನಗಳನ್ನು ಕಾಂಗ್ರೆಸ್, ಸಿಪಿಐ, ಸಿಪಿಎಂ, ಸಿಪಿಐ–ಎಂಎಲ್ ಮತ್ತು ವಿಕಾಸ್–ಶೀಲ್ ಇನ್ಸಾನ್‌ಗೆ (ವಿಐಪಿ) ಬಿಟ್ಟುಕೊಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇತ್ತ, ಕಾಂಗ್ರೆಸ್ ಪಕ್ಷವು ಕನಿಷ್ಠ 70 ಕಡೆ (2020ರಲ್ಲಿ ಸ್ಪರ್ಧಿಸಿದಷ್ಟೇ ಕ್ಷೇತ್ರಗಳಲ್ಲಿ) ಕಣಕ್ಕಿಳಿಯಲು ಬಯಸಿರುವುದಾಗಿ ಪುನರುಚ್ಛರಿಸಿದೆ. ಆದರೆ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಿಶಾದ್ ಸಮುದಾಯದ ಪ್ರಮುಖ ನಾಯಕ ಎಂದು ಹೇಳಿಕೊಳ್ಳುವ ವಿಐಪಿ ಸ್ಥಾಪಕ ಮುಕೇಶ್ ಸಾಹ್ನಿ ಅವರು 'ಮಹಾ ಮೈತ್ರಿ' ಅಧಿಕಾರಕ್ಕೇರಿದರೆ ಉಪಮುಖ್ಯಮಂತ್ರಿಯಾಗುವ ಬಯಕೆ ಹೊಂದಿದ್ದು, ಹೆಚ್ಚಿನ ಸ್ಥಾನಗಳ ನಿರೀಕ್ಷೆಯಲ್ಲಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ಬಿಹಾರ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಜೇಶ್ ರಾಮ್ ಅವರು, 'ಎನ್‌ಡಿಎ ಮೈತ್ರಿಕೂಟವನ್ನು ಬಿಹಾರದಲ್ಲಿ ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಮೊದಲ ಆದ್ಯತೆ. ಹಾಗಾಗಿ, ಸೀಟು ಹಂಚಿಕೆಯು ನಮ್ಮ ಗುರಿಗೆ ಅಡ್ಡಿಯಾಗದು' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.