
ಸೋನಭದ್ರ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಗಳಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮತ್ತು ಬಿಹಾರ ನಡುವಿನ ಬಾಂಧವ್ಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರತಿಕ್ರಿಯಿಸಿದ್ದಾರೆ.
ಸೋನಭದ್ರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಭಗವಾನ್ ರಾಮ ಮತ್ತು ಜಾನಕಿ ಮಾತಾ (ಸೀತೆ) ನಡುವಿನ ಪವಿತ್ರ ಬಂಧದಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸಂಸ್ಕೃತಿ, ಪರಂಪರೆ ಮತ್ತು ಸಂಕಲ್ಪವನ್ನು ಸಂಕೇತಿಸುತ್ತವೆ. ಎರಡು ರಾಜ್ಯಗಳ ನಡುವೆ ಮುರಿಯಲಾಗದ ಮತ್ತು ಬಲಷ್ಠವಾದ ಸಂಬಂಧವಿದೆ’ ಎಂದು ಹೇಳಿದ್ದಾರೆ.
‘ಬಿಹಾರದ ಜನರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ರಾಜ್ಯದ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಸ್ಥಿರತೆಗಾಗಿ ಡಬಲ್ ಎಂಜಿನ್ ಎನ್‌ಡಿಎ ಸರ್ಕಾರದ ಮೇಲಿನ ತಮ್ಮ ನಿರಂತರ ನಂಬಿಕೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ’ ಎಂದು ಯೋಗಿ ತಿಳಿಸಿದ್ದಾರೆ.
‘ರಾಷ್ಟ್ರೀಯ ಹಿತಾಸಕ್ತಿ ಮತ್ತು ಅಭಿವೃದ್ಧಿಯ ನೀತಿಗಳು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಲವಾದ ಸಾರ್ವಜನಿಕ ಬೆಂಬಲವನ್ನು ಪಡೆಯುತ್ತಿವೆ’ ಎಂದು ಅವರು ಹೇಳಿದ್ದಾರೆ.
ಬಿಹಾರದ ರಾಜಕೀಯಕಣದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್– ಪ್ರಧಾನಿ ನರೇಂದ್ರ ಮೋದಿ ಜೋಡಿಯ ಸುನಾಮಿಯ ಅಲೆಗೆ ಎನ್‌ಡಿಎ ಮೈತ್ರಿಕೂಟವು ಪ್ರಚಂಡ ದಿಗ್ವಿಜಯ ಸಾಧಿಸಿದೆ. ವಿಪಕ್ಷ ನಾಯಕ ರಾಹುಲ್ ಗಾಂಧಿ– ತೇಜಸ್ವಿ ಯಾದವ್ ಜೋಡಿ ನೇತೃತ್ವದ ಮಹಾಮೈತ್ರಿಕೂಟ ತರಗೆಲೆಯಂತೆ ದೂಳೀಪಟಗೊಂಡಿದೆ.
ಮೋದಿ–ನಿತೀಶ್ ಜೋಡಿಯ ಪ್ರಭಾವಳಿಯ ನೆರವಿನಿಂದ ಎನ್‌ಡಿಎ ಮೈತ್ರಿಕೂಟವು 203 ಸ್ಥಾನಗಳನ್ನು ಗೆದ್ದು ಬೀಗಿದೆ. ಇತ್ತ ಮಹಾಘಟಬಂಧನ್ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿದೆ.
ಬಿಜೆಪಿ ಮೂಲಗಳ ಪ್ರಕಾರ, ಆದಿತ್ಯನಾಥ ಅವರು ಬಿಹಾರದಲ್ಲಿ 10 ದಿನಗಳ ಪ್ರಚಾರದ ಸಂದರ್ಭದಲ್ಲಿ 43 ಎನ್‌ಡಿಎ ಅಭ್ಯರ್ಥಿಗಳ ಪರವಾಗಿ 30 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಜತೆಗೆ, ಒಂದು ರೋಡ್ ಶೋ ಕೂಡಾ ನಡೆಸಿದ್ದರು. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿದ್ದ ಅವರು, ‘ಜಂಗಲ್ ರಾಜ್’, ಅಪರಾಧ ಮತ್ತು ಭ್ರಷ್ಟಾಚಾರದ ವಿಷಯಗಳ ಕುರಿತು ಕಾಂಗ್ರೆಸ್-ಆರ್‌ಜೆಡಿಯನ್ನು ಕಟುವಾಗಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.