ADVERTISEMENT

ಹೊಸ ಕ್ರಿಮಿನಲ್‌ ಕಾನೂನು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಡಿಸೆಂಬರ್ 2023, 13:48 IST
Last Updated 25 ಡಿಸೆಂಬರ್ 2023, 13:48 IST
ರಾಷ್ಟ್ರಪತಿ ದ್ರೌಪದಿ ಮುರ್ಮು 
ರಾಷ್ಟ್ರಪತಿ ದ್ರೌಪದಿ ಮುರ್ಮು    

ನವದೆಹಲಿ: ಸಂಸತ್‌ನಲ್ಲಿ ಅಂಗೀಕಾರ ಪಡೆದಿರುವ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು (ಸೋಮವಾರ) ಅಂಕಿತ ಹಾಕಿದ್ದಾರೆ.

ಭಾರತೀಯ ನ್ಯಾಯ (ಎರಡನೆಯ) ಸಂಹಿತಾ ಮಸೂದೆ, ಭಾರತೀಯ ನಾಗರಿಕ ಸುರಕ್ಷಾ (ಎರಡನೆಯ) ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷ್ಯ (ಎರಡನೆಯ) ಮಸೂದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ಈ ಮಸೂದೆಗಳು ಕಾನೂನಾಗಿ ಪರಿವರ್ತನೆಗೊಂಡಿವೆ.

ADVERTISEMENT

ಹೊಸ ಕ್ರಿಮಿನಲ್‌ ಕಾನೂನು ಮಸೂದೆಗಳ ವಿಚಾರವಾಗಿ ಇತ್ತೀಚೆಗೆ ಲೋಕಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹೊಸ ಮಸೂದೆಗಳು ದೇಶದ ಜನರನ್ನು ವಸಾಹತು ಕಾಲದ ಮನಃಸ್ಥಿತಿಯಿಂದ ಮುಕ್ತಗೊಳಿಸಲಿವೆ ಎಂದು ಹೇಳಿದ್ದರು.

ಈ ಮೂರು ಮಸೂದೆಗಳು ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಜಾರಿಗೆ ಬರಲಿವೆ. ‘ಬ್ರಿಟಿಷರ ಕಾಲದಲ್ಲಿ ಈ ಮೂರು ಕಾನೂನುಗಳನ್ನು ರಚಿಸಲಾಯಿತು. ಈ ಕಾನೂನುಗಳನ್ನು ತೆಗೆದುಹಾಕುವವರೆಗೆ ಬ್ರಿಟನ್ನಿನ ಕಾನೂನುಗಳು ದೇಶದಲ್ಲಿ ಮುಂದುವರಿಯುತ್ತವೆ’ ಎಂದು ಶಾ ತಿಳಿಸಿದ್ದರು.

ಮೂರು ಮಸೂದೆಗಳು ‘ಸಂತ್ರಸ್ತರನ್ನು ಕೇಂದ್ರೀಕರಿಸಿಕೊಂಡ’, ‘ಸಾಕ್ಷ್ಯ ಆಧಾರಿತ’ ಹಾಗೂ ನ್ಯಾಯ ಪಡೆಯುವುದನ್ನು ಸುಲಲಿತವಾಗಿಸುವ ವ್ಯವಸ್ಥೆಯನ್ನು ಸೃಷ್ಟಿಸಲಿವೆ ಎಂದು ಶಾ ಹೇಳಿದ್ದರು. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು, ಸಂಸದರು, ಶಾಸಕರು, ಐಪಿಎಸ್ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಂದ ಒಟ್ಟು 3,200ಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ಇವುಗಳನ್ನು ರೂಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.