ADVERTISEMENT

ಕೇಜ್ರಿವಾಲ್ ಬಂಧನದಿಂದ ವಿಶ್ವದಾದ್ಯಂತ BJP ಟೀಕೆಗೆ ಗುರಿಯಾಗಿದೆ: ಅಖಿಲೇಶ್ ಯಾದವ್

ಪಿಟಿಐ
Published 31 ಮಾರ್ಚ್ 2024, 10:30 IST
Last Updated 31 ಮಾರ್ಚ್ 2024, 10:30 IST
<div class="paragraphs"><p>ಅಖಿಲೇಶ್ ಯಾದವ್</p></div>

ಅಖಿಲೇಶ್ ಯಾದವ್

   

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದೆ. ಹಾಗಾಗಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಭಾನುವಾರ ಆರೋಪಿಸಿದ್ದಾರೆ.

ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ದೆಹಲಿಯ ರಾಮಲೀಲಾ ಮೈದಾನದಲ್ಲಿ 'ಲೋಕತಂತ್ರ ಬಚಾವೋ' ರ್‍ಯಾಲಿ ನಡೆಸುತ್ತಿದೆ.

ADVERTISEMENT

ರ್‍ಯಾಲಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್, ‘ಅರವಿಂದ ಕೇಜ್ರಿವಾಲ್ ಅವರ ಬಂಧನದಿಂದಾಗಿ ಬಿಜೆಪಿ ವಿಶ್ವದಾದ್ಯಂತ ಟೀಕೆಗೆ ಗುರಿಯಾಗಿದೆ. ನಾವು (ವಿಪಕ್ಷ ನಾಯಕರು) ಇಂದು ದೆಹಲಿಗೆ ಬರುತ್ತಿರುವಾಗ, ಪ್ರಧಾನಿ ಮೋದಿ ಅವರು ದೆಹಲಿಯಿಂದ ಹೊರಗೆ ಹೋಗುತ್ತಿದ್ದಾರೆ. ಹಾಗಾಗಿ ಬಿಜೆಪಿಗರು ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ‘ ಎಂದು ಹೇಳಿದ್ದಾರೆ.

ಚುನಾವಣಾ ಬಾಂಡ್ ಯೋಜನೆ ವಿಚಾರ ಪ್ರಸ್ತಾಪಿಸಿದ ಅವರು, ‘ಇದೊಂದು ಕೇಂದ್ರ ಸರ್ಕಾರದ ಹೊಸ ಆವಿಷ್ಕಾರವಾಗಿದೆ. ಇ.ಡಿ, ಸಿಬಿಐ, ಐಟಿ ಇಲಾಖೆಗಳನ್ನು ಬಳಸಿಕೊಂಡು ಇಷ್ಟ ಬಂದಷ್ಟು ದೇಣಿಗೆ ಪಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ತನಗೆ ಬೇಕಾದುದನ್ನು ಮಾಡುತ್ತಿದೆ ಎಂಬುದಕ್ಕೆ ಕೇಜ್ರಿವಾಲ್ ಬಂಧನವೇ ಸಾಕ್ಷಿ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ ಅವರನ್ನು ಜೈ‍ಲಿಗೆ ಕಳುಹಿಸಲಾಗಿದೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಎಲ್ಲಾ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.