ADVERTISEMENT

BJP ಶಿವಾಜಿ ಮಹಾರಾಜರಿಗಿಂತ ಔರಂಗಜೇಬ್‌ಗೆ ಹೆಚ್ಚು ಮಹತ್ವ ನೀಡುತ್ತಿದೆ: ಶಿವಸೇನಾ

ಪಿಟಿಐ
Published 19 ಮಾರ್ಚ್ 2025, 13:05 IST
Last Updated 19 ಮಾರ್ಚ್ 2025, 13:05 IST
ಉದ್ಧವ್‌ ಠಾಕ್ರೆ
ಉದ್ಧವ್‌ ಠಾಕ್ರೆ   

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸುವಂತೆ ಕೂಗು ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಶಿವಸೇನಾ (ಯುಬಿಟಿ) ವಾಗ್ದಾಳಿ ನಡೆಸಿದೆ.

‘ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಛತ್ರಪತಿ ಶಿವಾಜಿ ಮಹಾರಾಜರಿಗಿಂತ ಮೊಘಲ್ ಚಕ್ರವರ್ತಿ ಔರಂಗಜೇಬ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಶಿವಾಜಿ ಮಹಾರಾಜರ ನೀತಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವುದಾಗಿತ್ತು. ಆದರೆ, ಈ ನೀತಿಯೂ ಬಿಜೆಪಿಯವರಿಗೆ ಎಂದಿಗೂ ಸ್ವೀಕಾರಾರ್ಹವಾಗಿರಲಿಲ್ಲ’ ಎಂದು ಶಿವಸೇನಾ (ಯುಬಿಟಿ) ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಟೀಕಿಸಿದೆ.

ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛತ್ರಪತಿ ಸಂಭಾಜಿ ಮಹಾರಾಜ್‌ ಅವರ ಕಥಾಹಂದರದ 'ಛಾವಾ' ಚಿತ್ರ ತೆರೆಕಂಡ ಬಳಿಕ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿಯವರು ಔರಂಗಜೇಬ್‌ ಸಮಾಧಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಹಾರಾಷ್ಟ್ರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಶಿವಸೇನಾ ಗುಡುಗಿದೆ.

ADVERTISEMENT

ರಾಜ್ಯದಲ್ಲಿ ಗಲಭೆಗಳನ್ನು ತಡೆಯಲು ಮತ್ತು ಮತಾಂಧರ ವಿರುದ್ಧ ಕ್ರಮ ಜರುಗಿಸುವ ಸಲುವಾಗಿ ಛತ್ರಪತಿ ಸಂಭಾಜಿನಗರದಲ್ಲಿರುವ ಔರಂಗಜೇಬ್‌ ಸಮಾಧಿಗೆ ನೀಡಲಾದ ರಕ್ಷಣೆ ಮತ್ತು ಸಂರಕ್ಷಿತ ಸ್ಮಾರಕ ಎಂಬ ಟ್ಯಾಗ್ ಅನ್ನು ಕೇಂದ್ರ ಸರ್ಕಾರ ಕೂಡಲೇ ತೆಗೆದುಹಾಕಬೇಕು ಎಂದೂ ಶಿವಸೇನಾ ಒತ್ತಾಯಿಸಿದೆ.

‘ಔರಂಗಜೇಬ್‌ ಸಮಾಧಿ ತೆರವು ವಿಚಾರವಾಗಿ ಸಂಪುಟ ಸಚಿವರು ದ್ವೇಷ ಹರಡಲು ಪ್ರಯತ್ನಿಸುತ್ತಿದ್ದರೂ, ಗೃಹ ಸಚಿವರೂ ಆಗಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮೌನವಾಗಿದ್ದಾರೆ. ಬಿಜೆಪಿ ಅಥವಾ ಆರ್‌ಎಸ್‌ಎಸ್‌ನವರು ಛತ್ರಪತಿ ಶಿವಾಜಿ ಅಥವಾ ಛತ್ರಪತಿ ಸಂಭಾಜಿಯನ್ನು ಸೈದ್ಧಾಂತಿಕ ಸಂಕೇತಗಳಾಗಿ ಪರಿಗಣಿಸಲಿಲ್ಲ. ಹೊರತುಪಡಿಸಿ ಛತ್ರಪತಿ ಶಿವಾಜಿ ಮತ್ತು ಛತ್ರಪತಿ ಸಂಭಾಜಿಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಬಯಸುತ್ತದೆ’ ಎಂದು ಶಿವಸೇನಾ ಆರೋಪಿಸಿದೆ.

ಖಳನಾಯಕನನ್ನು (ಔರಂಗಜೇಬ್‌) ಮುಗಿಸಿದ ನಂತರ ಛತ್ರಪತಿ ಶಿವಾಜಿ ಮತ್ತು ಛತ್ರಪತಿ ಸಂಭಾಜಿಯಂತಹ ವೀರರನ್ನು ಮುಗಿಸುವುದು ಬಿಜೆಪಿಯ ಗುರಿಯಾಗಿದೆ ಎಂದೂ ಶಿವಸೇನಾ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.