ಮುಂಬೈ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದತ್ತ ಸಾಗಿದ್ದು, 26 ವರ್ಷಗಳ ಬಳಿಕ ಬಿಜೆಪಿ ದೆಹಲಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ. ಈ ನಡುವೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೆಹಲಿ ವಿಧಾನಸಭಾ ಚುನಾವಣೆ ಗೆಲುವಿಗೆ ನರೇಂದ್ರ ಮೋದಿಯವರ ನೀಡಿದ ಗ್ಯಾರಂಟಿಗಳೇ 'ಮ್ಯಾಜಿಕ್' ಮಾಡಿದೆ. ಸುಳ್ಳು ಸೋತಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಬಳಿಕ ದೆಹಲಿ ಮತದಾರರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ದೆಹಲಿ ಅಭಿವೃದ್ಧಿಗೆ ಇದ್ದ ಅಡೆತಡೆಗಳನ್ನು (ಎಎಪಿ ಪಕ್ಷ) ತೊಡೆದು ಹಾಕಲಾಗಿದೆ. ಸಂವಿಧಾನ ಅಪಾಯದಲ್ಲಿದೆ ಎಂದು ಅಪಪ್ರಚಾರ ಮಾಡಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಜನರು ಪಾಠ ಕಲಿಸಿದ್ದಾರೆ ಎಂದು ಶಿಂದೆ ಕುಟುಕಿದ್ದಾರೆ.
ಸುಳ್ಳನ್ನು ಸೋಲಿಸಲಾಗಿದೆ. ಮತದಾರರು ಸತ್ಯದ ಪರವಾಗಿ ನಿಂತಿದ್ದಾರೆ. ಕಳೆದ ವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆಯೂ ಮತದಾರರು ಒಲವು ತೋರಿಸಿದ್ದಾರೆ ಎಂದು ಶಿಂದೆ ಅಭಿಪ್ರಾಯಪಟ್ಟಿದ್ದಾರೆ.
ಚುನಾವಣಾ ಆಯೋಗದ ಈಗಿನ ಟ್ರೆಂಡ್ (ಮಧ್ಯಾಹ್ನ 3.50) ಪ್ರಕಾರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಹಾಗೂ ಎಎಪಿ 22 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.