ಡ್ಯಾನಿಶ್ ಅಲಿ ಮತ್ತು ಪ್ರಣವ್ ಮುಖರ್ಜಿ
ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಆರ್‌ಎಸ್‌ಎಸ್ ಮೇಲಿದ್ದ ಪ್ರೀತಿಗಾಗಿ ಕೇಂದ್ರ ಸರ್ಕಾರವು ರಾಜ್‌ಘಾಟ್ ಆವರಣದ ರಾಷ್ಟ್ರೀಯ ಸ್ಮೃತಿಯಲ್ಲಿ ಸ್ಮಾರಕ ನಿರ್ಮಿಸಲು ಜಾಗ ಗುರುತಿಸಿದೆ ಎಂದು ಕಾಂಗ್ರೆಸ್ ಹೇಳಿದೆ.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೀಳುಮಟ್ಟದ ರಾಜಕೀಯದಲ್ಲಿ ತೊಡಗಿದೆ. ಇದಕ್ಕೆ ಸ್ಪಷ್ಟ ನಿರ್ದಶನ ಎಂಬಂತೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಮಾರಕಕ್ಕೆ ಸ್ಥಳವನ್ನು ಮೀಸಲಿಡುವ ಕೇಂದ್ರದ ನಿರ್ಧಾರವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮಾಡಿದ ಘೋರ ಅವಮಾನ’ ಎಂದು ಕಾಂಗ್ರೆಸ್ ನಾಯಕ ಡ್ಯಾನಿಶ್ ಅಲಿ ಕಿಡಿಕಾರಿದ್ದಾರೆ.
‘ಮೋದಿ ಸರ್ಕಾರವು ಸಾವಿನ ವಿಚಾರವಾಗಿ ಕೊಳಕು ರಾಜಕೀಯದಲ್ಲಿ ತೊಡಗಿದೆ ಮತ್ತು ರಾಜ್‌ಘಾಟ್ ಸ್ಮಾರಕ ಸ್ಥಳದಲ್ಲಿ ಮನಮೋಹನ್ ಸಿಂಗ್ ಅವರಿಗೆ ಜಾಗ ನೀಡಬೇಕೆಂಬ ಇಡೀ ರಾಷ್ಟ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ, ಇದೀಗ ಆದೇ ಜಾಗದಲ್ಲಿ ಪ್ರಣಬ್ ಮುಖರ್ಜಿ ಅವರ ಸ್ಮಾರಕ ನಿರ್ಮಿಸಲು ಮುಂದಾಗಿದೆ. ಇದು ಕೀಳುಮಟ್ಟದ ರಾಜಕೀಯವಾಗಿದ್ದು, ದೇಶದಲ್ಲಿ ಆರ್ಥಿಕ ಕ್ರಾಂತಿಗೆ ಕಾರಣರಾದ ಮಾಜಿ ಪ್ರಧಾನಿಗೆ ಮಾಡಿದ ಅವಮಾನವಾಗಿದೆ’ ಎಂದು ಅಲಿ ಗುಡುಗಿದ್ದಾರೆ.
‘ಪ್ರಣಬ್ ಮುಖರ್ಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮೇಲೆ ಹೆಚ್ಚು ಪ್ರೀತಿ ಹೊಂದಿದ್ದರು. ಇದಕ್ಕೆ ಉಡುಗೊರೆಯಾಗಿ ರಾಜ್‌ಘಾಟ್ ಆವರಣದ ‘ರಾಷ್ಟ್ರೀಯ ಸ್ಮೃತಿ’ಯಲ್ಲಿ ಸ್ಮಾರಕ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದಂತಿದೆ. ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್‌ನ ನಾಗಪುರದ ಕೇಂದ್ರ ಕಚೇರಿಯಲ್ಲಿ ತಲೆಬಾಗಿ ಸಂಘದ ಸಂಸ್ಥಾಪಕ ಹೆಡ್ಗೆವಾರ್ ಅವರಿಗೆ ಗೌರವ ಸಲ್ಲಿಸಿದ್ದರು. ಸಂಸತ್ ಭವನದಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಹಾಕಿಸುವಲ್ಲೂ ಪ್ರಮುಖ ಪಾತ್ರವಹಿಸಿದ್ದರು’ ಎಂದು ಅಲಿ ವ್ಯಂಗ್ಯವಾಡಿದ್ದಾರೆ.
ಈಚೆಗೆ ನಿಧನರಾದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸ್ಮಾರಕ ನಿರ್ಮಾಣದ ವಿಷಯದಲ್ಲಿ ಗೊಂದಲದ ಮಧ್ಯೆಯೇ ಈ ಬೆಳವಣಿಗೆ ನಡೆದಿದೆ.
ಪ್ರಣವ್‌ಗೆ ಸ್ಮಾರಕ ನಿರ್ಮಿಸುವ ತನ್ನ ನಿರ್ಧಾರವನ್ನು ಸರ್ಕಾರವು ಅವರ ಕುಟುಂಬಕ್ಕೆ ತಿಳಿಸಿದೆ. ಪ್ರಣವ್ ಪುತ್ರಿ ಶರ್ಮಿಷ್ಠಾ ಮುಖರ್ಜಿ, ಪ್ರಧಾನಿ ಮೋದಿ ಅವರಿಗೆ ಮಂಗಳವಾರ ಧನ್ಯವಾದ ಸಲ್ಲಿಸಿದ್ದಾರೆ.
‘ಮಾಜಿ ರಾಷ್ಟ್ರಪತಿ ದಿವಂಗತ ಪ್ರಣವ್ ಮುಖರ್ಜಿ ಅವರ ಸ್ಮಾರಕ ನಿರ್ಮಿಸಲು ‘ರಾಷ್ಟ್ರೀಯ ಸ್ಮೃತಿ' ಸಂಕೀರ್ಣದೊಳಗೆ (ರಾಜ್‌ಘಾಟ್ ಆವರಣದ ಒಂದು ಭಾಗ) ಗೊತ್ತುಪಡಿಸಿದ ಜಾಗಕ್ಕೆ ಸಂಬಂಧಪಟ್ಟ ಪ್ರಾಧಿಕಾರವು ಅನುಮೋದನೆ ನೀಡಿದೆ’ ಎಂದು ಶರ್ಮಿಷ್ಠಾ ಅವರಿಗೆ ಬರೆದ ಪತ್ರದಲ್ಲಿ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.