ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಸ್ತಿ
ಬೆಂಗಳೂರು/ಲಂಡನ್: ಬುಧವಾರದ ನಸುಕಿನ ಹೊತ್ತು. ಬಾನಲ್ಲಿ ಇನ್ನೂ ಕತ್ತಲು ಆವರಿಸಿತ್ತು. ಆ ಹೊತ್ತಿನಲ್ಲಿ ಕನ್ನಡದ ‘ಎದೆಯ ಹಣತೆ’ಯೊಂದು ಜಗತ್ತಿನ ಸಾಹಿತ್ಯ ದಿಗಂತದಲ್ಲಿ ತನ್ನ ಬೆಳಕನ್ನು ಹರಡಿ ಮಿನುಗಿತು. ಕನ್ನಡಿಗರ ಸಂಭ್ರಮವೂ ಹೊನಲಾಗಿ ಹರಿಯಿತು. ಹೌದು, ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಸಂಕಲನ ‘ಹಾರ್ಟ್ ಲ್ಯಾಂಪ್’ಗೆ ‘ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ’ ಒಲಿದ ಕ್ಷಣ ಅದಾಗಿತ್ತು.
ಇದು ಕನ್ನಡಕ್ಕೆ ಬಂದ ಮೊದಲ ‘ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ’. ಕಥಾ ಸಂಕಲನವೊಂದಕ್ಕೆ ಈ ಗೌರವ ಲಭಿಸುತ್ತಿರುವುದು ಕೂಡ ಇದೇ ಮೊದಲು. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆಗೆ ಕನ್ನಡದವರೇ ಆದ ದೀಪಾ ಭಾಸ್ತಿ (ಬಾನು ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದವರು) ಒಳಗಾದರು. ಆ ಮೂಲಕ ಕನ್ನಡಿಗರ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ವಕೀಲೆ, ಚಳವಳಿಗಾರ್ತಿ, ಕಥೆಗಾರ್ತಿ – ಇವು ಮೂರೂ ಬಾನು ಅವರ ವ್ಯಕ್ತಿತ್ವದ ಮೂರು ಭಿನ್ನ ಮುಖಗಳು. ವಕೀಲೆಯಾಗಿ ಅವರು ಹೆಚ್ಚು ಸಕ್ರಿಯರು. ತಮ್ಮ ಕಾಲದ ಎಲ್ಲ ಮಹತ್ವದ ಚಳವಳಿಗಳಲ್ಲೂ ಅವರು ಮುಖ್ಯ ಭೂಮಿಕೆಯಲ್ಲಿ ನಿಂತವರು. ಹಾಗೆ ನೋಡಿದರೆ ಬರಹ ಅವರ ನಂತರದ ಆಯ್ಕೆ. ತಮ್ಮ ಸಮುದಾಯದ ಬದುಕನ್ನು ಕಥೆಗಳಲ್ಲಿ ದಾಖಲಿಸುವಾಗ ವಕೀಲಿಕೆ ಹಾಗೂ ಚಳವಳಿಗಳಲ್ಲಿ ಕಂಡುಂಡ ಅನುಭವಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡರು. ಅವರ ಕಥಾ ಜಗತ್ತಿನ ಬದುಕು ಎಷ್ಟೊಂದು ಜೀವಂತಿಕೆಯಿಂದ ಕೂಡಿದೆ ಎನ್ನುವುದಕ್ಕೆ ಈಗ ಒಲಿದು ಬಂದಿರುವ ಪ್ರಶಸ್ತಿಯೇ ಸಾಕ್ಷಿ.
ಟೇಟ್ ಮಾಡರ್ನ್‌ನಲ್ಲಿ ನಡೆದ ಸಮಾರಂಭದಲ್ಲಿ ಮಂಗಳವಾರ ರಾತ್ರಿ ಪ್ರಶಸ್ತಿ ಘೋಷಿಸಲಾಯಿತು. (50,000 ಪೌಂಡ್ (₹57,41,490) ಮೌಲ್ಯದ ಪ್ರಶಸ್ತಿ ಇದಾಗಿದೆ. ತಮ್ಮ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿರುವ ದೀಪಾ ಭಾಸ್ತಿ ಅವರೊಟ್ಟಿಗೆ ಬಾನು ಮುಷ್ತಾಕ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಮೊತ್ತವನ್ನು ಇಬ್ಬರೂ ಸಮಾನವಾಗಿ ಹಂಚಿಕೊಂಡರು.
ಬಾನು ಅವರ ಸಂಕಲನದ 12 ಕಥೆಗಳಲ್ಲಿ ಸಹಿಷ್ಣುಭಾವ, ಪ್ರತಿರೋಧ, ವಿಡಂಬನೆ, ದಕ್ಷಿಣ ಭಾರತದ ಪುರುಷಪ್ರಧಾನ ಸಮಾಜದಲ್ಲಿನ ಪ್ರತಿ ಹೆಣ್ಣುಮಗಳಲ್ಲಿನ ಸಹೋದರಿ ಪ್ರಜ್ಞೆ ಮಿಳಿತವಾಗಿವೆ. ಆಡುಮಾತಿನಲ್ಲಿ ಕಟ್ಟಲಾಗಿರುವ ಕಥೆಗಳಿವು. ಇವೆಲ್ಲವುಗಳ ಜತೆಗೆ ಈ ಕಥಾಜಗತ್ತಿನ ಚಲನಶೀಲ ಹಾಗೂ ಕಾಡುವ ಗುಣಗಳು ಪ್ರಶಸ್ತಿ ಸುತ್ತಿನಲ್ಲಿ ಇತರ ಕೃತಿಗಳನ್ನು ಹಿಂದಿಕ್ಕಿದವು.
ಪ್ರಶಸ್ತಿಯನ್ನು ಘೋಷಿಸಿದ್ದೇ ತಡ, ಬಾನು ಹಾಗೂ ಭಾಸ್ತಿ ಇಬ್ಬರೂ ಪರಸ್ಪರ ಆಲಿಂಗಿಸಿದರು. ‘ವೈವಿಧ್ಯಕ್ಕೆ ಸಂದ ಗೌರವವಿದು’ ಎಂದು ಬಾನು ಅವರು ಭಾವುಕರಾಗಿ ಹೇಳಿದರು. ‘ನನ್ನ ಭಾಷೆಗೆ ಸಂದಿರುವ ಸುಂದರವಾದ ಗೆಲುವು ಈ ಪ್ರಶಸ್ತಿ’ ಎಂದು ಅನುವಾದಕಿ ಭಾಸ್ತಿ ಪ್ರತಿಕ್ರಿಯಿಸಿದರು.
ಜಗತ್ತಿನ ಆರು ಕೃತಿಗಳು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿನಲ್ಲಿ ಪರಿಗಣಿತವಾಗಿದ್ದವು.
‘ಇಂಗ್ಲಿಷ್ ಓದುಗರಿಗೆ ನಿಜಕ್ಕೂ ಹೊಸತೇ ಆದ ಕೃತಿ ಇದು. ಆಮೂಲಾಗ್ರವಾದ ಅನುವಾದವು ಭಾಷೆಯನ್ನು ದುಡಿಸಿಕೊಂಡಿರುವ ಬಗೆ ಸೊಗಸಾಗಿದೆ. ಹಲವು ಬಗೆಯ ‘ಇಂಗ್ಲಿಷ್‌ಗಳು’ ಇಲ್ಲಿ ಬಹುತ್ವದ ಆಯಾಮದಲ್ಲಿ ಸೃಷ್ಟಿಯಾಗಿವೆ. ಅನುವಾದವನ್ನು ವಿಸ್ತೃತವಾಗಿ ಅರ್ಥೈಸಿಕೊಳ್ಳುವ ಸವಾಲನ್ನೂ ಈ ಕೃತಿ ಎದುರಲ್ಲಿಟ್ಟಿದೆ’ ಎಂದು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ–2025ರ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಮ್ಯಾಕ್ಸ್ ಪೋರ್ಟರ್ ಶ್ಲಾಘಿಸಿದರು.
‘ತೀರ್ಪುಗಾರರಿಗೆ ಮೊದಲ ಓದಿನಿಂದಲೇ ಕೃತಿಯು ಖುಷಿ ಕೊಟ್ಟಿತು. ಒಬ್ಬೊಬ್ಬರೂ ತಾವು ಮೆಚ್ಚಿಕೊಳ್ಳಲು ಬಗೆಬಗೆಯ ಕಾರಣಗಳನ್ನು ನೀಡುತ್ತಾ ಹೋದರು’ ಎಂದು ಹೇಳಿದರು.
ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಆಡಳಿತಾಧಿಕಾರಿ ರಿಯಾಮೆಟಾ ರೋಕೊ ಅವರೂ ‘ಹಾರ್ಟ್ ಲ್ಯಾಂಪ್’ ಕೃತಿಯನ್ನು ಮನದುಂಬಿ ಹೊಗಳಿದರು. ದಮನಿತಗೊಂಡ ಮಹಿಳೆಯ ಮೂರು ದಶಕಗಳ ಆರ್ತನಾದವೊಂದು ಕಥೆಗಳಲ್ಲಿ ಮಿಳಿತವಾಗಿದೆ. ಜಗತ್ತಿನ ಪುರುಷ–ಮಹಿಳೆಯರೆಲ್ಲರೂ ಕೃತಿಯನ್ನು ಓದಬೇಕು. ಸಹಾನುಭೂತಿಯಿಂದಲೂ ದಕ್ಷತೆಯಿಂದಲೂ ಮಾಡಿರುವ ಅನುವಾದವಿದು ಎಂದು ಕೊಂಡಾಡಿದರು.
ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಡ್ಯಾನಿಷ್ ಲೇಖಕಿ ಸಾಲ್ವೆಜ್ ಬಲ್ಲೆ ಅವರ ‘ಆನ್ ದಿ ಕ್ಯಾಲ್‌ಕ್ಯುಲೇಷನ್ ಆಫ್ ವಾಲ್ಯೂಮ್ 1’ (ಅನುವಾದ: ಬಾರ್ಬರಾ ಜೆ. ಹ್ಯಾವ್‌ಲ್ಯಾಂಡ್), ಫ್ರೆಂಚ್ ಲೇಖಕ ವಿನ್ಸೆಂಟ್ ಡೆಲೆಕ್ರಾಯಿಕ್ಸ್ ಅವರ ‘ಸ್ಮಾಲ್ ಬೋಟ್’ (ಅನು: ಹೆಲೆನ್ ಸ್ಟೀವನ್‌ಸನ್), ಜಪಾನ್ ಲೇಖಕಿ ಹಿರೋಮಿ ಕವಾಕಮಿ ಅವರ ‘ಅಂಡರ್ ದಿ ಐ ಆಫ್ ದಿ ಬಿಗ್ ಬರ್ಡ್’ (ಅನು: ಅಸಾ ಯೊನೆಡಾ), ಇಟಲಿಯ ಬರಹಗಾರ ವಿನ್ಸೆನ್ಝೊ ಲ್ಯಾಟ್ರೊನಿಕೊ ಅವರ ‘ಪರ್ಫೆಕ್ಷನ್’ (ಅನು: ಸೋಫಿ ಹ್ಯೂಸ್), ಫ್ರೆಂಚ್ ಲೇಖಕಿ ಆ್ಯನೆ ಸೆರೆ ಅವರ ‘ಎ ಲಿಯೊಪಾರ್ಡ್–ಸ್ಕಿನ್ ಹ್ಯಾಟ್’ (ಅನು: ಮಾರ್ಕ್ ಹಚಿನ್‌ಸನ್) ಕೃತಿಗಳಿದ್ದವು.
ಅಂತಿಮ ಸುತ್ತು ಪ್ರವೇಶಿಸಿದ ಪ್ರತಿ ಕೃತಿಗೆ 5000 ಪೌಂಡ್ (₹5,70000ಕ್ಕೂ ಹೆಚ್ಚು) ಬಹುಮಾನ ದೊರೆತಿದೆ. ಬೂಕರ್ ಪ್ರಶಸ್ತಿಯ ಮೊತ್ತವನ್ನು ಲೇಖಕಿ ಹಾಗೂ ಅನುವಾದರ ನಡುವೆ ಸಮನಾಗಿ ಹಂಚಲಾಗಿದೆ.
ಗೀತಾಂಜಲಿ ಶ್ರೀ ಅವರ ‘ಟೋಂಬ್ ಆಫ್ ಸ್ಯಾಂಡ್’ ಕೃತಿಗೆ (ಹಿಂದಿಯಿಂದ ಇಂಗ್ಲಿಷ್‌ಗೆ ಡೈಸಿ ರಾಕ್‌ವೆಲ್ ಅನುವಾದಿಸಿದ್ದರು) 2022ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿತ್ತು. ಅದಾದ ನಂತರ ಭಾರತದ ಕೃತಿಗೆ ಈ ಪ್ರಶಸ್ತಿ ಲಭಿಸುತ್ತಿರುವುದು ಈಗಲೇ. 2023ರಲ್ಲಿ ತಮಿಳು ಕಾದಂಬರಿಕಾರ ಪೆರುಮಾಳ್ ಮುರುಗನ್ ಅವರ ‘ಪೈರ್’ (ಅನುವಾದ: ಅನಿರುದ್ಧನ್ ವಾಸುದೇವನ್) ಕೃತಿಯು ಪ್ರಶಸ್ತಿಯ ಅಂತಿಮ ಸುತ್ತು ಪ್ರವೇಶಿಸಿತ್ತು.
ಈ ಪ್ರಶಸ್ತಿಯು ವೈವಿಧ್ಯಕ್ಕೆ ಸಂದಿರುವ ಗೆಲುವು. ಯಾವ ಕಥೆಯೂ ಎಂದಿಗೂ ಸಣ್ಣದಲ್ಲ ಎಂಬ ನಂಬಿಕೆಯಿಂದ ಕೃತಿಯು ರೂಪುತಳೆದಿದೆ. ಮನುಷ್ಯನ ಅನುಭವವೊಂದು ವಸ್ತ್ರವಿದ್ದಂತೆ. ಅದರ ಪ್ರತಿ ಎಳೆಯೂ ಭಾರವನ್ನು ಹಿಡಿದಿಟ್ಟುಕೊಳ್ಳುತ್ತದೆ– ಬಾನು ಮುಷ್ತಾಕ್
‘ಜೇನಿನ ಹೊಳೆಯೊ ಹಾಲಿನ ಮಳೆಯೊ’
ಅನುವಾದಕಿ ದೀಪಾ ಭಾಸ್ತಿ ಅವರು ಕನ್ನಡ ಭಾಷೆಯ ಸೊಗಡು ಹಾಗೂ ಮಹತ್ವವನ್ನು ಜಗತ್ತಿನೆದುರು ಸಾರಲು ‘ಚಲಿಸುವ ಮೋಡಗಳು’ ಸಿನಿಮಾದ ‘ಜೇನಿನ ಹೊಳೆಯೊ ಹಾಲಿನ ಮಳೆಯೊ’ ಹಾಡಿನ ಸಾಲುಗಳನ್ನು ಉದ್ಧರಿಸಿದರು. ಚಿ. ಉದಯಶಂಕರ್ ಬರೆದಿರುವ ಈ ಸಾಲುಗಳ ಅರ್ಥವನ್ನೂ ಅವರು ಇಂಗ್ಲಿಷ್‌ನಲ್ಲಿ ಬಿಚ್ಚಿಟ್ಟರು. ಕಥೆಗಳಲ್ಲಿ ಬಾನು ಮುಷ್ತಾಕ್ ಅವರು ಬಳಸಿರುವ ಉರ್ದು ಹಾಗೂ ಪರ್ಷಿಯನ್ ಪದಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡುವಾಗ ದೀಪಾ ಯಥಾವತ್ತು ಉಳಿಸಿಕೊಂಡಿದ್ದಾರೆ. ಕಥೆಗಳು ಹೊರಡಿಸುವ ಧ್ವನಿಯನ್ನು ಅರ್ಥೈಸಿಕೊಳ್ಳುವಲ್ಲಿ ಇದು ನೆರವಿಗೆ ಬಂದಿದೆ ಎಂದೂ ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿಗೆ ಭಾರತೀಯ ಸಾಹಿತ್ಯದ– ಅದೂ ಒಂದು ಭಾಷೆಯ ಸಾಹಿತ್ಯದ– ಬಗ್ಗೆ ಅಲ್ಪ ತಿಳಿವಳಿಕೆ ಇತ್ತು. ಇಂದು ವ್ಯತ್ಯಾಸ ಏನೆಂದರೆ, ಜನರು ಭಾಷೆಗಳ ವೈವಿಧ್ಯವನ್ನು ಅರಿತುಕೊಳ್ಳತೊಡಗಿದ್ದಾರೆ. ದೇಶದ ಭಾಷೆಗಳ ಬಹುತ್ವ ಮತ್ತು ಶ್ರೀಮಂತಿಕೆಯನ್ನು ಕಾಣುವುದು ಬಹಳ ಮುಖ್ಯವಾದುದಾಗಿದೆ. ಬಾನು ಮತ್ತು ಭಾಸ್ತಿ ಅವರನ್ನು ನಾನು ಅಭಿನಂದಿಸುತ್ತೇನೆ.– ಗೀತಾಂಜಲಿ ಶ್ರೀ, ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿದ್ದ ಭಾರತದ ಮೊದಲ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.