ಬಂಧಿತ ಆರೋಪಿಗಳು
ಹೈದರಾಬಾದ್: ತಿರುಪತಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನಾಂಶ ಬಳಕೆ ಮಾಡಿದ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ನಾಲ್ವರನ್ನು ಬಂಧಿಸಿದೆ ಎಂದು ವರದಿಯಾಗಿದೆ.
ಬಂಧಿತರನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ (ರೂರ್ಕಿ, ಉತ್ತರಾಖಂಡ), ಬಿಪಿನ್ ಜೈನ್, ಪೊಮಿಲ್ ಜೈನ್, ವೈಷ್ಣವಿ ಡೈರಿ (ಪೂನಂಬಾಕ್ಕಂ) ಸಿಇಒ ಅಪೂರ್ವ ವಿನಯ್ ಕಾಂತ್ ಚಾವ್ಡಾ ಮತ್ತು ಎಆರ್ ಡೈರಿಯ (ದುಂಡಿಗಲ್) ವ್ಯವಸ್ಥಾಪಕ ನಿರ್ದೇಶಕ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ತಿರುಪತಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತುಪ್ಪ ಪೂರೈಕೆಯ ಸಂದರ್ಭದಲ್ಲಿ ಗಂಭೀರ ಉಲ್ಲಂಘನೆಗಳು ಕಂಡುಬಂದಿದ್ದು, ಪ್ರತಿ ಹಂತದಲ್ಲೂ ಅಕ್ರಮ ನಡೆದಿರುವುದು ಸಿಬಿಐ ತನಿಖೆ ವೇಳೆ ದೃಢಪಟ್ಟಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ತುಪ್ಪ ಪೂರೈಕೆಗೆ ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿ ಹೆಸರಿನಲ್ಲಿ ಟೆಂಡರ್ ಪಡೆದಿದ್ದಾರೆ. ವೈಷ್ಣವಿ ಡೈರಿಯು ಎಆರ್ ಡೈರಿ ಹೆಸರನ್ನು ಬಳಸಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ನಕಲಿ ದಾಖಲೆಗಳನ್ನು ಮತ್ತು ಸೀಲುಗಳನ್ನು ಬಳಸಿದೆ. ಜತೆಗೆ, ಉತ್ತರಾಖಂಡ ರೂರ್ಕಿಯ ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಪಡೆಯುವುದಾಗಿ ವೈಷ್ಣವಿ ಡೈರಿ ನಕಲಿ ದಾಖಲೆಗಳನ್ನು ಸೃಷ್ಟಿಸಿದೆ ಎಂದು ಸಿಬಿಐ ತಿಳಿಸಿದೆ.
ಭೋಲೆ ಬಾಬಾ ಡೈರಿಗೆ ಇಷ್ಟೊಂದು ಪ್ರಮಾಣದ ತುಪ್ಪವನ್ನು ಪೂರೈಸುವ ಸಾಮರ್ಥ್ಯ ಇಲ್ಲ. ಹಾಗಾಗಿ ತುಪ್ಪ ಪೂರೈಕೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವುದರಿಂದ ಮೂರು ಡೈರಿಗಳ ನಾಲ್ವರನ್ನು ಬಂಧಿಸಲಾಗಿದೆ ಎಂದು ಸಿಬಿಐ ತಂಡ ಮಾಹಿತಿ ನೀಡಿದೆ.
ಆಂಧ್ರಪ್ರದೇಶದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಲಾಡು ತಯಾರಿಸಲು ಪ್ರಾಣಿಗಳ ಕೊಬ್ಬಿನಾಂಶ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಗರಣ ಬೆಳಕಿಗೆ ಬಂದಾಗ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.
ಪ್ರಕರಣ ಸಂಬಂಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿತ್ತು.
ಐದು ಸದಸ್ಯರ ತಂಡದಲ್ಲಿ ಸಿಬಿಐನ ಇಬ್ಬರು, ಆಂಧ್ರಪ್ರದೇಶ ಸರ್ಕಾರದ ಇಬ್ಬರು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್‌ಎಐ) ಒಬ್ಬರು ಇದ್ದರು.
ತಿರುಪತಿಯಲ್ಲಿ ಲಡುಗಳನ್ನು ತಯಾರಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಪ್ರತಿದಿನ 15,000 ಕೆ.ಜಿ ತುಪ್ಪವನ್ನು ಬಳಸುತ್ತದೆ. ಸದ್ಯ ತಮಿಳುನಾಡಿನ ಎಆರ್ ಫುಡ್ಸ್ ಪ್ರತಿ ಕೆ.ಜಿಗೆ ₹320ರಂತೆ ತುಪ್ಪವನ್ನು ಪೂರೈಸಲು ಟೆಂಡರ್ ಪಡೆದುಕೊಂಡಿದೆ.
2024ರ ಜುಲೈ 8ರಂದು ಎಂಟು ಟ್ಯಾಂಕರ್ ತುಪ್ಪ ಬಂದಿದ್ದು, ನಾಲ್ಕು ಟ್ಯಾಂಕರ್‌ಗಳಲ್ಲಿ ಇದ್ದ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜು. 17ರಂದು ಎನ್‌ಡಿಡಿಬಿ ಲ್ಯಾಬ್ ವರದಿಗಳು ತುಪ್ಪ ಕಲಬೆರಕೆಯಾಗಿರುವುದು ದೃಢಪಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.