ADVERTISEMENT

ಚೀನಾದ ಸೇನಾ ನಿಯೋಜನೆ ಕಳವಳಕಾರಿ ಸಂಗತಿ: ಸೇನಾ ಮುಖ್ಯಸ್ಥ ನರವಣೆ

ಪಿಟಿಐ
Published 9 ಅಕ್ಟೋಬರ್ 2021, 8:36 IST
Last Updated 9 ಅಕ್ಟೋಬರ್ 2021, 8:36 IST
ಜನರಲ್ ಎಂ. ಎಂ. ನರವಣೆ
ಜನರಲ್ ಎಂ. ಎಂ. ನರವಣೆ   

ನವದೆಹಲಿ: ಪೂರ್ವ ಲಡಾಖ್‌ ಪ್ರದೇಶದಲ್ಲಿ ಚೀನಾ ಸೇನಾ ನಿಯೋಜನೆಯನ್ನು ಬಲಗೊಳಿಸುತ್ತಿರುವುದು ಕಳವಳಕಾರಿ ಸಂಗತಿ ಎಂದಿರುವ ಸೇನಾ ಮುಖ್ಯಸ್ಥ ಜನರಲ್ ನರವಣೆ, ‘ಗಡಿಭಾಗದಲ್ಲಿ ನಡೆಯುತ್ತಿರುವ ಚೀನಾದ ಎಲ್ಲ ಚಟುವಟಿಕಗಳ ಮೇಲೆ ಭಾರತ ತೀವ್ರ ನಿಗಾ ಇರಿಸಿದೆ‘ ಎಂದು ಹೇಳಿದ್ದಾರೆ.

ಶನಿವಾರ ಇಲ್ಲಿ ನಡೆದ ಇಂಡಿಯನ್‌ ಟುಡೆ ಕಾನ್‌ಕ್ಲೇವ್‌ನಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಪೂರ್ವ ಲಡಾಖ್‌ನಲ್ಲಿ ಚೀನಾ ಸೇನೆ ಬಲಪಡಿಸುತ್ತಿದೆ. ಜತೆಗೆ ಬೃಹತ್ ಪ್ರಮಾಣದ ಸೇನೆಯನ್ನು ನಿಯೋಜಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿದೆ ಎಂದು ತಿಳಿಸಿದ್ದಾರೆ.

ಚೀನಾ, ಚಳಿಗಾಲದ ಎರಡನೇ ಅವಧಿಯಲ್ಲೂ ತನ್ನ ಸೇನಾ ನಿಯೋಜನೆಯನ್ನು ಮುಂದುವರಿಸಿದರೆ, ಪಾಕಿಸ್ತಾನದ ಎಲ್‌ಒಸಿಯಲ್ಲಿನ (ಗಡಿ ನಿಯಂತ್ರಣ ರೇಖೆ) ಪರಿಸ್ಥಿತಿ ಇಲ್ಲಿಯೂ ತಲೆದೋರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಚೀನಾ ತನ್ನ ಸೇನೆ ನಿಯೋಜನೆಯನ್ನು ಮುಂದುವರಿಸಿದರೆ, ನಮ್ಮ ಬದಿಯಲ್ಲಿ ಭಾರತೀಯ ಸೇನೆಯೂ ತನ್ನ ಅಸ್ತಿತ್ವ ವನ್ನು ಉಳಿಸಿಕೊಳ್ಳಲಿದೆ. ಇದು ಪಿಎಲ್‌ಎ ಕೈಗೊಂಡಿರುವ ಕ್ರಮಗಳಿಗಿಂತ ಉತ್ತಮವಾಗಿದೆ‘ ಎಂದು ನರವಣೆ ಹೇಳಿದರು.

‘ಹೌದು, ಚೀನಾ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇನೆ ನಿಯೋಜನೆ ಮುಂದುವರಿದಿದೆ. ಇದು ಕಳವಳಕಾರಿ ಸಂಗತಿ. ಈ ಎಲ್ಲಾ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆದರೆ ಅವರು ಸೇನಾ ನಿಯೋಜನೆ ಮುಂದುವರಿಸಿದರೆ, ನಾವು ಕೂಡ ಅದೇ ರೀತಿ ಮಾಡುತ್ತೇವೆ‘ಎಂದು ಅವರು ಹೇಳಿದರು.

ಭಾರತ ಮತ್ತು ಚೀನಾದ ಸೇನಾಪಡೆಗಳು ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಸುಮಾರು 17 ತಿಂಗಳು ನಿಯೋಜನೆಗೊಂಡಿದ್ದರೂ, ಸಂಘರ್ಷಗಳಿಂದ ದೂರವಿದ್ದು, ಸರಣಿ ಮಾತುಕತೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.