ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನೇತೃತ್ವದ ಸಚಿವ ಸಂಪುಟವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಸಾಬೀತು ಮಾಡಿತು.
ಶಿವಸೇನಾ ಶಾಸಕ ಉದಯ್ ಸಾಮಂತ್ ಮತ್ತು ಇತರರು ಮಂಡಿಸಿದ ವಿಶ್ವಾಸಮತ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಸದನವು ವಿಶ್ವಾಸಮತವನ್ನು ಅಂಗೀಕರಿಸಿದೆ ಎಂದು ಘೋಷಿದರು.
288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ, ಶಿವಸೇನಾ (ಶಿಂದೆ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಪಕ್ಷಗಳನ್ನೊಳಗೊಂಡ ‘ಮಹಾಯುತಿ’ ಮೈತ್ರಿಕೂಟವು 230 ಸ್ಥಾನಗಳೊಂದಿಗೆ ಭಾರಿ ಬಹುಮತ ಹೊಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತಕ್ಕೆ 144 ಶಾಸಕರ ಬೆಂಬಲ ಅಗತ್ಯವಿದೆ.
ದೇವೆಂದ್ರ ಫಡಣವೀಸ್ ಅವರು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಡಿಸೆಂಬರ್ 5ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದ್ದಾರೆ.
‘ಅಸಾಂವಿಧಾನಿಕ ಸರ್ಕಾರಕ್ಕೆ ನಾರ್ವೇಕರ್ ನೆರವು’
ಪುಣೆ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ರಾಹುಲ್ ನಾರ್ವೇಕರ್ ಅವರನ್ನು ಚುನಾಯಿಸಿದ ಪ್ರಕ್ರಿಯೆಯನ್ನು ಶಿವಸೇನಾ (ಉದ್ಧವ್ ಬಣ) ಸೋಮವಾರ ವಿರೋಧಿಸಿತು. ಆಯ್ಕೆ ಪ್ರಕ್ರಿಯೆಯಿಂದಲೇ ಹೊರಗುಳಿಯಿತು.
ನಾರ್ವೇಕರ್ ಅವರು ಈ ಹಿಂದೆ ಸ್ಪೀಕರ್ ಆಗಿದ್ದಾಗ ಅಸಾಂವಿಧಾನಿಕ ಸರ್ಕಾರ ನಡೆಸಲು ನೆರವು ನೀಡಿದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಕ್ಷದ ನಾಯಕ ಆದಿತ್ಯ ಠಾಕ್ರೆ ಸೋಮವಾರ ಹೇಳಿದರು.
‘2022ರಲ್ಲಿ ಶಿವಸೇನಾ ಪಕ್ಷವು ವಿಭಜನೆಯಾದಾಗ ಸೂರತ್‌ನಿಂದ ಗುವಾಹಟಿಗೆ ಪರಾರಿಯಾದ ಶಾಸಕರ ಬಗ್ಗೆ ಎಲ್ಲರಿಗೂ ತಿಳಿದಿದೆ. ನಾರ್ವೇಕರ್ ಅವರನ್ನು ಸ್ಪೀಕರ್ ಆಗಿ ಹೇಗೆ ಚುನಾಯಿಸಲಾಗಿದೆ ಎಂಬುದೂ ಗೊತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಅವರು ಸ್ಪೀಕರ್ ಆಗಿ ಅನ್ಯಾಯ ಮಾಡುವುದಿಲ್ಲ ಎಂದು ಭಾವಿಸುತ್ತೇನೆ’ ಎಂದು ಹೇಳಿದರು.
ಶಿವಸೇನಾ ಪಕ್ಷವು ವಿಭಜನೆಯಾದಾಗ ಏಕನಾಥ ಶಿಂದೆ ನೇತೃತ್ವದ ಬಣವೇ ನಿಜವಾದ ಶಿವಸೇನಾ ಎಂದು ಸ್ಪೀಕರ್ ನಾರ್ವೇಕರ್ ತೀರ್ಪು ನೀಡಿದ್ದರು. ನಂತರ ಎನ್‌ಸಿಪಿ ವಿಭಜನೆಯಾದಾಗ ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.