ADVERTISEMENT

ಪಾಕಿಸ್ತಾನದ ನೆರವಿನೊಂದಿಗೆ 12 ಭಾರತೀಯರನ್ನು ರಕ್ಷಿಸಿದ ಕರಾವಳಿ ಪಡೆ

ಪಿಟಿಐ
Published 5 ಡಿಸೆಂಬರ್ 2024, 7:10 IST
Last Updated 5 ಡಿಸೆಂಬರ್ 2024, 7:10 IST
<div class="paragraphs"><p>ಭಾರತೀಯ ಕರಾವಳಿ ಪಡೆಯಿಂದ ರಕ್ಷಣಾ ಕಾರ್ಯಾಚರಣೆ</p></div>

ಭಾರತೀಯ ಕರಾವಳಿ ಪಡೆಯಿಂದ ರಕ್ಷಣಾ ಕಾರ್ಯಾಚರಣೆ

   

(ಚಿತ್ರ ಕೃಪೆ: X/@IndiaCoastGuard)

ಪೋರಬಂದರ್: ಉತ್ತರ ಹಿಂದೂ ಮಹಾಸಾಗರದಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ಸರಕುಸಾಗಣೆ ಹಡಗಿನಲ್ಲಿದ್ದ 12 ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.

ADVERTISEMENT

‘ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಪಾಕಿಸ್ತಾನ ಸಮುದ್ರಮಾರ್ಗ ರಕ್ಷಣಾ ಸಂಸ್ಥೆ (ಪಿಎಂಎಸ್‌ಎ) ಜಂಟಿಯಾಗಿ ಈ ರಕ್ಷಣಾ ಕಾರ್ಯವನ್ನು ಕೈಗೊಂಡಿದ್ದವು. ಮಾನವೀಯ ನೆಲೆಯ ಈ ಕಾರ್ಯದಲ್ಲಿ ಉಭಯ ದೇಶಗಳ ಸಿಬ್ಬಂದಿ ನಡುವೆ ಕಾರ್ಯಾಚರಣೆಯುದ್ದಕ್ಕೂ ಉತ್ತಮ ಸಂವಹನ ಇತ್ತು‌’ ಎಂದು ಹೇಳಿಕೆ ತಿಳಿಸಿದೆ.

‘ಎಂಎಸ್‌ವಿ ಎಐ ಪಿರನ್‌ಪಿರ್’ ಹೆಸರಿನ ಹಡಗು ಗುಜರಾತ್‌ನ ಪೋರಬಂದರ್‌ನಿಂದ ಇರಾನ್‌ನ ಅಬ್ಬಾಸ್‌ ಬಂದರಿಗೆ ತೆರಳುತ್ತಿತ್ತು. ಭಾರತದ ಜಲಗಡಿಯ ಹೊರಗೆ ಹಾಗೂ ಪಾಕಿಸ್ತಾನದ ಶೋಧ ಮತ್ತು ರಕ್ಷಣಾ ವಲಯದಲ್ಲಿ ಹಡಗು ಆಪ‍ತ್ತಿಗೆ ಸಿಲುಕಿದ್ದಾಗ ರಕ್ಷಣಾ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕುಸಾಗಣೆ ಹಡಗು ಡಿ.2ರಂದು ಪೋರಬಂದರ್‌ನ ಬಂದರಿನಿಂದ ನಿರ್ಗಮಿಸಿತ್ತು. ಮಾರ್ಗಮಧ್ಯೆ ಬುಧವಾರ ಬೆಳಗಿನಜಾವ ಪ್ರವಾಹ ಮತ್ತು ನೀರಿನ ಏರಿಳಿತದ ಪರಿಣಾಮ ಮುಳುಗಲು ಆರಂಭಿಸಿತ್ತು. ಆಪತ್ತು ಕುರಿತ ಕರೆ ಬಂದ ಕೂಡಲೇ ಜಾಗೃತರಾದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಪೊರಬಂದರ್‌ನ ಐಸಿಜಿ ಪ್ರಾದೇಶಿಕ ಕಚೇರಿಗೆ ತುರ್ತು ಮಾಹಿತಿ ನೀಡಿದ್ದು, ಪಾಕ್‌ ಸಂಸ್ಥೆಗೂ ನೆರವು ಕೋರಲಾಯಿತು ಎಂದು ತಿಳಿಸಿದೆ.

ರಕ್ಷಣಾ ಕಾರ್ಯದ ಹಡಗು ‘ಸಾರ್ಥಕ್‌’ ಸ್ಥಳ‌ ತಲುಪಿಸಿದ್ದು, ಹಡಗಿನಲ್ಲಿದ್ದ 12 ಸಿಬ್ಬಂದಿ ರಕ್ಷಿಸಲಾಯಿತು. ಈ ಸ್ಥಳ ದ್ವಾರಕಾದಿಂದ ಪಶ್ಚಿಮಕ್ಕೆ 270 ಕಿ.ಮೀ ದೂರದಲ್ಲಿತ್ತು. ಸಿಬ್ಬಂದಿಗೆ ರಕ್ಷಿಸಲಾದ ‘ಸಾರ್ಥಕ್‌’ನಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೆರವು ನೀಡಿ, ಪೋರಬಂದರ್ ಬಂದರಿಗೆ ಕರೆತರಲಾಯಿತು ಎಂದು ಹೇಳಿಕೆ ವಿವರಿಸಿದೆ. 

ಈ ಕುರಿತಂತೆ ಪಿಎಂಎಸ್‌ಎ ಕೂಡಾ ಹೇಳಿಕೆ ನೀಡಿದೆ. ‘ಹಡಗು ಪಾಕಿಸ್ತಾನದ ವಿಶೇಷ ಆರ್ಥಿಕ ವಲಯ ವ್ಯಾಪ್ತಿಯಲ್ಲಿ ಆಪತ್ತಿಗೆ ಸಿಲುಕಿತ್ತು. ಪಿಎಂಎಸ್‌ಎ ವಿಮಾನವನ್ನು ಬಳಸಿ ಸ್ಥಳ ಗುರುತಿಸಲಾಯಿತು. ಉತ್ತಮ ಸಹಕಾರದಿಂದಾಗಿ ಭಾರತೀಯ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ರಕ್ಷಿಸಲಾಯಿತು’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.