ADVERTISEMENT

ಕುನಾಲ್ ಕಾಮ್ರಾ ಯಾರು? ಶಿಂದೆಯನ್ನು ಟೀಕಿಸುವ ಅರ್ಹತೆಗಳಿವೆಯೇ?: ನಟಿ ಕಂಗನಾ ರನೌತ್

ಶಿಂದೆ ವಿರುದ್ಧ ಕಾಮ್ರಾ ಆಕ್ಷೇಪಾರ್ಹ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2025, 7:17 IST
Last Updated 25 ಮಾರ್ಚ್ 2025, 7:17 IST
<div class="paragraphs"><p>ಕಂಗನಾ ರನೌತ್ </p></div>

ಕಂಗನಾ ರನೌತ್

   

– ಪಿಟಿಐ ಚಿತ್ರ

ನವದೆಹಲಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಗುರಿಯಾಗಿಸಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ನೀಡಿರುವ ಆಕ್ಷೇಪಾರ್ಹ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ADVERTISEMENT

ಶಿಂದೆ ಅವರನ್ನು ‘ವಂಚಕ’ ಎಂದು ಕರೆದ ಕುನಾಲ್ ಕಾಮ್ರಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಹಾಗೂ ಏಕನಾಥ ಶಿಂದೆ ಬಣದ ಶಿವಸೇನಾ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್, ‘ಹಾಸ್ಯದ ಹೆಸರಿನಲ್ಲಿ ಬೇರೆಯವರನ್ನು ಅಗೌರವಿಸುವುದು ಸರಿಯಲ್ಲ. ಏಕನಾಥ ಶಿಂದೆ ಅವರು ಬಹಳ ಹಿಂದೆಯೇ ರಿಕ್ಷಾ ಓಡಿಸುತ್ತಿದ್ದರು. ಅವರು ಬಹಳಷ್ಟು ಸಾಧನೆ ಮಾಡಿದ್ದಾರೆ. ಆದರೆ, ಕುನಾಲ್ ಕಾಮ್ರಾ ಅವರಿಗೆ ಯಾವ ಅರ್ಹತೆಗಳಿವೆ? ಅವರು ಯಾರು? ಹಾಸ್ಯದ ಹೆಸರಿನಲ್ಲಿ ಅವರು ನಮ್ಮ ಪವಿತ್ರ ಗ್ರಂಥಗಳು, ರಾಜಕೀಯ ನಾಯಕರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕಾಮ್ರಾ ಅವರು ತಮ್ಮನ್ನು ತಾವು ಪ್ರಭಾವಿಗಳು ಎಂದು ಕರೆದುಕೊಳ್ಳುತ್ತಾರೆ. ಕೇವಲ ಎರಡು ನಿಮಿಷಗಳ ಖ್ಯಾತಿಗಾಗಿ ನಮ್ಮ ಸಮಾಜ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಯೋಚಿಸಬೇಕಿದೆ’ ಎಂದು ಕಂಗನಾ ಕಿಡಿಕಾರಿದ್ದಾರೆ.

ಕುನಾಲ್‌ ಕಾಮ್ರಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

‘ಇದು ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಸಂಬಂಧಿಸಿದ್ದಲ್ಲ; ಆತ್ಮಗೌರವದ ವಿಚಾರ. ನಿಮ್ಮ ಹಿರಿಯರನ್ನು ಗುರಿಯಾಗಿಸಿದಾಗ, ಅಂತಹ ಮನಃಸ್ಥಿತಿಯವರನ್ನು ನೀವು ಗುರಿಯಾಗಿಸುತ್ತೀರಿ’ ಎಂದು ಕನಲ್ ಅವರು ಸೋಮವಾರ ಹೇಳಿದ್ದರು. ‘ಇದು ಟ್ರೇಲರ್ ಮಾತ್ರ, ಸಿನಿಮಾ ಇನ್ನೂ ಇದೆ’ ಎಂದು ಕನಲ್ ಎಚ್ಚರಿಕೆ ನೀಡಿದ್ದರು.

ದಾಂದಲೆ ನಡೆಸಿದವರ ಪೈಕಿ 15–20 ಮಂದಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಅಕ್ರಮ’ ಶೆಡ್‌ ತೆರವು

ಮುಂಬೈ: ಕುನಾಲ್‌ ಕಾಮ್ರಾ ಅವರು ಹಾಸ್ಯ ಕಾರ್ಯಕ್ರಮ ನಡೆಸಿದ್ದ ಸ್ಟುಡಿಯೊದ ‘ಅಕ್ರಮ ಭಾಗ’ವನ್ನು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯು ತೆರವುಗೊಳಿಸಿದೆ.

‘ಸ್ಟುಡಿಯೊ ಮಾಲೀಕರು ತಾತ್ಕಾಲಿಕವಾದ ಕೆಲವು ಶೆಡ್‌ಗಳನ್ನು ಅಕ್ರಮವಾಗಿ ನಿರ್ಮಿಸಿದ್ದರು. ಅದನ್ನು ನಾವು ತೆರವು ಮಾಡುತ್ತಿದ್ದೇವೆ. ಇದಕ್ಕೆ ನೋಟಿಸ್‌ ನೀಡಬೇಕಾದ ಅಗತ್ಯವಿಲ್ಲ’ ಎಂದು ಪಾಲಿಕೆಯ ಸಹಾಯಕ ಆಯುಕ್ತ ವಿನಾಯಕ ವಿಸ್ಪುತೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.