ADVERTISEMENT

Delhi Elections | ಎಎಪಿ ಪ್ರಮುಖರ ವಿರುದ್ಧ ಕಾಂಗ್ರೆಸ್‌ನ ಘಟಾನುಘಟಿಗಳ ಸ್ಪರ್ಧೆ

‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳ ನಡುವೆಯೇ ತೀವ್ರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 0:30 IST
Last Updated 13 ಜನವರಿ 2025, 0:30 IST
ಅರವಿಂದ ಕೇಜ್ರಿವಾಲ್ 
ಅರವಿಂದ ಕೇಜ್ರಿವಾಲ್    
2013ರಿಂದ ಮೂರು ಕ್ಷೇತ್ರಗಳಲ್ಲಿ ಗೆಲ್ಲದ ಕಾಂಗ್ರೆಸ್ ಕೇಜ್ರಿವಾಲ್‌ ಮಣಿಸುವ ಹೊಣೆ ಸಂದೀಪ್‌ ದೀಕ್ಷಿತ್‌ ಹೆಗಲಿಗೆ | ಕಾಲ್ಕಾಜಿ: ಆತಿಶಿ ವಿರುದ್ಧ ಗೆಲವೂ ಸುಲಭದ ತುತ್ತಲ್ಲ

ನವದೆಹಲಿ: ಆಮ್‌ ಆದ್ಮಿ ಪಕ್ಷ (ಎಎಪಿ) ಹಾಗೂ ಕಾಂಗ್ರೆಸ್‌, ‘ಇಂಡಿಯಾ’ ಮೈತ್ರಿಕೂಟದ ಅಂಗಪಕ್ಷಗಳಾಗಿದ್ದರೂ ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಗಳಾಗಿವೆ. 

ಎಎಪಿಯ ಘಟಾನುಘಟಿ ನಾಯಕರ ವಿರುದ್ಧ ಕಾಂಗ್ರೆಸ್‌ ಪಕ್ಷ ತನ್ನ ಪ್ರಭಾವಿ ನಾಯಕರನ್ನು ಕಣಕ್ಕಿಳಿಸಿದೆ. 

ನವದೆಹಲಿ ಕ್ಷೇತ್ರದಲ್ಲಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ವಿರುದ್ಧ ಪಕ್ಷದ ಮಾಜಿ ಸಂಸದ ಸಂದೀಪ್‌ ದೀಕ್ಷಿತ್‌, ಕಾಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಆತಿಶಿ ವಿರುದ್ಧ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಾಂಬಾ ಹಾಗೂ ಜಂಗಪುರದಲ್ಲಿ ಮತ್ತೊಬ್ಬ ಹಿರಿಯ ಮುಖಂಡ ಮನೀಷ್‌ ಸಿಸೋಡಿಯಾ ವಿರುದ್ಧ ಮಾಜಿ ಮೇಯರ್ ಫರ್ಹಾದ್‌ ಸೂರಿ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

ADVERTISEMENT

ಇಷ್ಟಾಗಿಯೂ, ಎಎಪಿ ಅಭ್ಯರ್ಥಿಗಳಿಗೆ ಕಾಂಗ್ರೆಸ್‌ ಉಮೇದುವಾರರು ತಕ್ಕ ಪೈಪೋಟಿ ನೀಡುವರೇ ಎಂಬ ಅನುಮಾನ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದಿನ ಮೂರು ಚುನಾವಣೆಗಳಲ್ಲಿ ಈ ಕ್ಷೇತ್ರಗಳಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಕ್ರಮವಾಗಿ 3,200 ರಿಂದ 13,600 ಮತಗಳನ್ನು ಮಾತ್ರ ಪಡೆದಿದ್ದರು.

ಗಮನಾರ್ಹ ಸಂಗತಿ ಎಂದರೆ, ಈ ಮೂರು ಕ್ಷೇತ್ರಗಳಲ್ಲಿ 2013ರಿಂದ ಕಾಂಗ್ರೆಸ್‌ ಗೆಲುವು ಸಾಧಿಸಿಲ್ಲ. 

‘ಈ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕಿದೆ. ಇದಕ್ಕಾಗಿ ಎಎಪಿ ವಿರುದ್ಧ ಸೆಣಸಬೇಕಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳುತ್ತಾರೆ.

ನವದೆಹಲಿ ಕ್ಷೇತ್ರ: ಈ ಕ್ಷೇತ್ರವನ್ನು ಸಂದೀಪ್ ದೀಕ್ಷಿತ್‌ ತಾಯಿ, ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಪ್ರತಿನಿಧಿಸಿದ್ದರು. 2013ರಲ್ಲಿ ಶೀಲಾ ದೀಕ್ಷಿತ್‌, ಕೇಜ್ರಿವಾಲ್‌ ವಿರುದ್ಧ ಪರಾಭವಗೊಂಡರು.

ಈ ಕ್ಷೇತ್ರವನ್ನು ಪುನಃ ಗೆದ್ದುಕೊಂಡು ಬರುವ ಜವಾಬ್ದಾರಿಯನ್ನು ಸಂದೀಪ್‌ ಅವರಿಗೆ ಪಕ್ಷ ವಹಿಸಿದೆ. ಆದರೆ, 2020ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಕೇವಲ 3,200 ಮತಗಳನ್ನು ಪಡೆಯುವಲ್ಲಿ ಯಶ ಕಂಡಿತ್ತು.

ಜಂಗಪುರ ಕ್ಷೇತ್ರ: ಈ ಕ್ಷೇತ್ರದಲ್ಲಿ ಮಾಜಿ ಮೇಯರ್‌ ಫರ್ಹಾದ್ ಸೂರಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ತರ್ವಿಂದರ್‌ ಸಿಂಗ್‌ ಮಾರ್ವಾ ಕಣಕ್ಕಿಳಿದಿದ್ದಾರೆ.

ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದ ಮಾರ್ವಾ, 2013ರಲ್ಲಿ ಪರಾಭವಗೊಂಡರು. ಆಗಿನ ಚುನಾವಣೆಗಳಿಂದಲೂ ಕಾಂಗ್ರೆಸ್‌ನ ಮತ ಪ್ರಮಾಣ ಕುಸಿಯುತ್ತಲೇ ಬಂದಿದೆ. 

ಕಾಲ್ಕಾಜಿ ಕ್ಷೇತ್ರ: ಮುಖ್ಯಮಂತ್ರಿ ಆತಿಶಿ ಅವರು ಸ್ಪರ್ಧಿಸಿರುವ ಕಾಲ್ಕಾಜಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಗೆಲುವು ಸಾಧಿಸುವರು ಎಂಬ ಉಮೇದು ಕೂಡ ಕಾಂಗ್ರೆಸ್‌ನಲ್ಲಿ ಕಾಣುತ್ತಿಲ್ಲ.

ಆತಿಶಿ ಅವರು ಪ್ರತಿ ಚುನಾವಣೆಯಲ್ಲಿಯೂ ತಮ್ಮ ಮತ ಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದಾರೆ. 2008ರ ಚುನಾವಣೆಯಿಂದ ಹಿಡಿದು ಇಲ್ಲಿಯವರೆಗೆ ಕಾಂಗ್ರೆಸ್‌ ಮತ ಗಳಿಕೆ ಪ್ರಮಾಣ ಕುಸಿಯುತ್ತಲೇ ಬಂದಿದೆ. ಮತ ಗಳಿಕೆ ಪ್ರಮಾಣದಲ್ಲಿ ಕ್ರಮೇಣ ತುಸು ಹೆಚ್ಚಳ ಕಂಡುಬಂದಿರುವುದು ಬಿಜೆಪಿ ಪಾಲಿಗೆ ಸಮಾಧಾನ ತಂದಿದೆ.

ಆತಿಶಿ

ದೇಣಿಗೆ ಸಂಗ್ರಹಣೆಗೆ ಚಾಲನೆ

ಚುನಾವಣೆ ಎದುರಿಸಲು ಅಗತ್ಯವಿರುವ ಹಣವನ್ನು ಜನರಿಂದ ದೇಣಿಗೆ ಪಡೆಯಲು ಆರಂಬಿಸಿರುವ ಅಭಿಯಾನಕ್ಕೆ ದೆಹಲಿ ಮುಖ್ಯಮಂತ್ರಿ ಆತಿಶಿ ಅವರು ಚಾಲನೆ ನೀಡಿದರು. 

ಜನರ ಸಹಾಯದಿಂದ ₹40 ಲಕ್ಷ ಸಂಗ್ರಹಿಸಲು ‘atishi.aamaadmiparty.org’ ಎಂಬ ವೆಬ್‌ಸೈಟ್‌ ಅನ್ನು ಆತಿಶಿ ಭಾನುವಾರ ಪ್ರಾರಂಭಿಸಿದರು.

ಈ ವೇಳೆ ಮಾತನಾಡಿದ ಅವರು ‘ವಾಮ ಮಾರ್ಗದಿಂದ ಚುನಾವಣೆ ಯಲ್ಲಿ ಗೆಲುವು ಸಾಧಿಸಲು ನನ್ನಂತಹ ಹುದ್ದೆಯಲ್ಲಿರುವ ವ್ಯಕ್ತಿಗೆ ₹40 ಲಕ್ಷ
ಸಂಗ್ರಹಿಸುವುದು ಕಷ್ಟದ ಕೆಲಸವೇನಲ್ಲ. ಆದರೆ ನಾನು ಹಾಗೂ ಎಎಪಿಯು ಅಂತಹ ದಾರಿಗಳನ್ನು ಹುಡುಕುವುದಿಲ್ಲ’ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಕೊಳೆಗೇರಿ ನೆಲಸಮ: ಕೇಜ್ರಿವಾಲ್‌

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ದೆಹಲಿಯಲ್ಲಿರುವ ಎಲ್ಲಾ ಕೊಳೆಗೇರಿಗಳನ್ನು ಧ್ವಂಸಗೊಳಿಸು ತ್ತದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಆರೋಪಿಸಿದರು. 

‘ಎಎಪಿಯು ಕೊಳೆಗೇರಿ ನಿವಾಸಿಗಳಿಗೆ ಕೊಳಕು
ನೀರು ಪೂರೈಕೆ ಮಾಡುತ್ತಿದೆ. ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆಯೊಂದಿಗೆ ಕಸದ ರಾಶಿಯಲ್ಲಿ ದಯನೀಯ ಸ್ಥಿತಿಯಲ್ಲಿ ಬದುಕುವಂತೆ ಮಾಡಿದೆ’ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಹೇಳಿದ್ದರು. 

ಅಮಿತ್ ಶಾ ಆರೋಪದ ಬೆನ್ನಲ್ಲೇ, ಶಾಕುರ್‌ ಬಸ್ತಿಯಲ್ಲಿರುವ ಕೊಳೆಗೇರಿಯೊಂದಕ್ಕೆ ಭಾನುವಾರ ಮುಂಜಾನೆ ತೆರಳಿದ ಕೇಜ್ರಿವಾಲ್‌ ಅವರು, ಅಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು ‘ಬಿಜೆಪಿಯು ಕೊಳೆಗೇರಿ ನಿವಾಸಿಗಳ ಕಲ್ಯಾಣಕ್ಕಿಂತ ಭೂ ಸ್ವಾಧೀನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಚುನಾವಣೆಯ ಮೊದಲು ಅವರಿಗೆ ನಿಮ್ಮ ಮತ ಬೇಕು. ಬಳಿಕ ನಿಮ್ಮ ಭೂಮಿ ಬೇಕಿದೆ. ಬಿಜೆಪಿಯು ಕೊಳೆಗೇರಿ ನಿವಾಸಿಗಳನ್ನು ಕೀಟಗಳಂತೆ ಕಾಣುತ್ತದೆ’ ಎಂದು ಆರೋಪಿಸಿದರು. 

‘ಬಿಜೆಪಿಗೆ ಮತ ಹಾಕಿದರೆ, ಕೊಳೆಗೇರಿ ನಿವಾಸಿಗಳು ತಮ್ಮ ಆತ್ಮಹತ್ಯೆ ಪತ್ರಗಳಿಗೆ ಸಹಿ ಮಾಡಿದಂತೆ. ಬಿಜೆಪಿ ತನ್ನ ಸ್ನೇಹಿತನಿಗೆ (ಗೌತಮ್‌ ಅದಾನಿಯನ್ನು ಉಲ್ಲೇಖಿಸಿ) ನಿಮ್ಮ ಭೂಮಿಯನ್ನು ನೀಡುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.