ADVERTISEMENT

ಗಡಿಯ ಸುರಂಗದಲ್ಲಿ 265 ಅಡಿ ಆಕ್ಸಿಜನ್ ಪೈಪ್; ಅಮರನಾಥ ಯಾತ್ರೆಯ ಮೇಲೆ ಉಗ್ರರ ಕಣ್ಣು

ಪಿಟಿಐ
Published 6 ಮೇ 2022, 2:49 IST
Last Updated 6 ಮೇ 2022, 2:49 IST
ಸಾಂಬಾದಲ್ಲಿ ಪತ್ತೆಯಾಗಿರುವ ಸುರಂಗ
ಸಾಂಬಾದಲ್ಲಿ ಪತ್ತೆಯಾಗಿರುವ ಸುರಂಗ   

ಸಾಂಬಾ: ಮುಂಬರಲಿರುವ ಅಮರನಾಥ ಯಾತ್ರೆಗೆ ಅಡ್ಡಿ ಪಡಿಸಲು ಪಾಕಿಸ್ತಾನ ಮೂಲದ ಉಗ್ರರು ನಡೆಸಿದ್ದ ಯೋಜನೆಯನ್ನು ವಿಫಲಗೊಳಿಸಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಗುರುವಾರ ಹೇಳಿದೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಭೂಗತ ಸುರಂಗ ಪತ್ತೆ ಮಾಡಲಾಗಿತ್ತು.

ಭೂಗತ ಸುರಂಗ ಪತ್ತೆ ಕಾರ್ಯಾಚರಣೆಯಲ್ಲಿ ಬಿಎಸ್‌ಎಫ್‌ ಪಡೆಗಳು ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ 265 ಅಡಿ ಉದ್ದದ ಆಕ್ಸಿಜನ್‌ ಪೈಪ್‌ಗಳನ್ನು ಗುರುತಿಸಿವೆ. ಅದರ ಬೆನ್ನಲ್ಲೇ ಜಮ್ಮು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡುವ ಸಮಯದಲ್ಲಿ ನುಸುಳುಕೋರರ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಾಕಿಸ್ತಾನ ಕಡೆಯಿಂದ ಒಳನುಸುಳುವ ಪ್ರಯತ್ನಗಳು ಗಡಿಯಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಬಿಎಸ್ಎಫ್‌ ಕಟ್ಟೆಚ್ಚರದಿಂದಾಗಿ ಸುರಂಗ ಪತ್ತೆಯಾಯಿತು' ಎಂದು ಬಿಎಸ್‌ಎಫ್‌ ಐಜಿ ಡಿ.ಕೆ.ಬೂರಾ ಹೇಳಿದ್ದಾರೆ.

ADVERTISEMENT

'ಬುಧವಾರ ಸಂಜೆ 5:30ಕ್ಕೆ ಸುರಂಗ ಪತ್ತೆಯಾಗಿತ್ತು. ಅದರೊಳಗೆ ಮರಳಿನ ಹಸಿರು ಚೀಲಗಳಿದ್ದವು. ಅದರ ಉದ್ದ 150 ಮೀಟರ್‌ ಇದೆ. ಒಳಗಡೆ ಗಡಿಯ ಬೇಲಿ ವರೆಗೂ 100 ಮೀಟರ್‌ ಹಾಗೂ ಅಲ್ಲಿಂದ ಮುಂದಕ್ಕೆ 50 ಮೀಟರ್‌ ಉದ್ದದ ಸುರಂಗ ತೋಡಲಾಗಿದೆ. ಅದು ಕಾಡಿನ ಪ್ರದೇಶಕ್ಕೆ ಹಾದಿ ಸಂಪರ್ಕಿಸುತ್ತದೆ' ಎಂದಿದ್ದಾರೆ.

'ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ನಡೆಯುವ ಸಮಯದಲ್ಲಿ ದಾಳಿ ನಡೆಸಲು ಉಗ್ರರು ಯೋಜಿಸಿದ್ದರು. ಅದನ್ನು ವಿಫಲಗೊಳಿಸಲಾಗಿದೆ. ಇದು ಹೊಸ ಸುರಂಗದ ರೀತಿ ಕಾಣುತ್ತಿದೆ. ಸುಂಜ್ವಾನ್‌ ದಾಳಿಗೂ ಇದಕ್ಕೂ ಇರುವ ಸಂಬಂಧದ ಕುರಿತು ತನಿಖೆಗೆ ಪ್ರಯತ್ನಿಸುತ್ತಿದ್ದೇವೆ. ಆತ್ಮಾಹುತಿ ದಾಳಿ ನಡೆಸಿದ ಉಗ್ರರು ಇದೇ ಸುರಂಗದ ಮೂಲಕ ಒಳನುಸುಳಿರುವ ಸಾಧ್ಯತೆ ಇದೆ. ಆದರೆ, ಆ ಬಗ್ಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ...' ಎಂದು ಮಾಹಿತಿ ನೀಡಿದ್ದಾರೆ.

ಯಂತ್ರಗಳನ್ನು ಬಳಸಿ ಸುರಂಗಗಳ ಪತ್ತೆ ಮಾಡುವ ಕಾರ್ಯಾಚರಣೆ ಮುಂದುವರಿದಿದೆ. ಒಂದೂವರೆ ವರ್ಷಗಳ ಅಂತರದಲ್ಲಿ ಬಿಎಸ್‌ಎಫ್‌ ಒಟ್ಟು ಐದು ಸುರಂಗಗಳನ್ನು ಪತ್ತೆ ಮಾಡಿದೆ.

ಕಣಿವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಎರಡು ದಿನಗಳ ಮುನ್ನ (ಏ.22) ಜಮ್ಮುವಿನ ಸುಂಜ್ವಾನ್‌ ಸೇನೆ ನೆಲೆ ಬಳಿ ಪಾಕಿಸ್ತಾನದ ನುಸುಳುಕೋರರ ಆತ್ಮಾಹುತಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬಿಎಸ್‌ಎಫ್‌ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಭೂಗತ ಸುರಂಗ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತ್ತು. ಆತ್ಮಾಹುತಿ ದಾಳಿಕೋರರು ಭೂಗತ ಸುರಂಗದ ಮೂಲಕ ಕಣಿವೆ ಪ್ರದೇಶವನ್ನು ಪ್ರವೇಶಿಸಿರಬಹುದು ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.