ADVERTISEMENT

ವಿಮಾನ ದುರಂತ: ಅಪಘಾತ ಕಾರಣ ಪತ್ತೆಗೆ ಸಮಿತಿ

ಕೇಂದ್ರ ಸರ್ಕಾರ ನಿರ್ಧಾರ; 270 ತಲುಪಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 23:34 IST
Last Updated 14 ಜೂನ್ 2025, 23:34 IST
ಏರ್‌ ಇಂಡಿಯಾ ವಿಮಾನ ದುರಂತ
ಏರ್‌ ಇಂಡಿಯಾ ವಿಮಾನ ದುರಂತ   

ಅಹಮದಾಬಾದ್/ ನವದೆಹಲಿ: ಏರ್‌ ಇಂಡಿಯಾ ವಿಮಾನ ದುರಂತದ ಕಾರಣ ಪತ್ತೆಹಚ್ಚಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ಶನಿವಾರ ರಚಿಸಿದೆ. ಈ ಮಧ್ಯೆ, ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 270ಕ್ಕೆ ಏರಿಕೆಯಾಗಿದೆ.

‘ಅಪಘಾತಕ್ಕೆ ಕಾರಣವಾದ ಅಂಶಗಳನ್ನು ಪರಿಶೀಲಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದನ್ನು ತಡೆಯಲು ಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಸಿದ್ಧಪಡಿಸಲು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಸಮಿತಿಯು ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಇತರ ಸಂಸ್ಥೆಗಳಿಗೆ ಪರ್ಯಾಯವಾಗಿ ಕೆಲಸ ಮಾಡುವುದಿಲ್ಲ. ಎಸ್‌ಒಪಿ ರೂಪಿಸುವತ್ತ ಗಮನಹರಿಸಲಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದೆ’ ಎಂದು ಹೇಳಿದರು.

ADVERTISEMENT

‘ಅಪಘಾತಕ್ಕೀಡಾದ ವಿಮಾನದ ಬ್ಲ್ಯಾಕ್‌ ಬಾಕ್ಸ್ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಅದರಲ್ಲಿನ ದತ್ತಾಂಶಗಳ ಪರಿಶೀಲನೆಯು ದುರಂತಕ್ಕೆ ಕೆಲವೇ ಕ್ಷಣಗಳ ಮೊದಲು ಏನಾಯಿತು ಎಂಬ ಕುರಿತು ಮಾಹಿತಿ ಒದಗಿಸಲಿದೆ’ ಎಂದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಗುರುವಾರ ಮಧ್ಯಾಹ್ನ ಮೇಘಾನಿನಗರದ ಬಿ.ಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್‌ ಕಟ್ಟಡಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿದ್ದ 242 ಮಂದಿಯಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ವೈದ್ಯಕೀಯ ಕಾಲೇಜು ಹಾಸ್ಟೆಲ್‌ ಸಂಕೀರ್ಣದಲ್ಲಿದ್ದ 29 ಮಂದಿ ದುರಂತದಲ್ಲಿ ಮೃತಪಟ್ಟಿದ್ದು, ಇದರಲ್ಲಿ ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳು ಸೇರಿದ್ದಾರೆ.

ಮತ್ತೊಂದು ಮೃತದೇಹ ಪತ್ತೆ: ‘ವಿಮಾನ ದುರಂತದ ಸ್ಥಳದಲ್ಲಿ ಕಳೆದ 24 ಗಂಟೆಗಳಲ್ಲಿ ಒಂದು ಮೃತದೇಹ ಮತ್ತು ಮಾನವ ದೇಹದ ಕೆಲವು ಭಾಗಗಳು ದೊರೆತಿವೆ’ ಎಂದು ಅಹಮದಾಬಾದ್‌ ಅಗ್ನಿಶಾಮಕ ಮತ್ತು ತುರ್ತು ಸೇವೆ (ಎಎಫ್‌ಇಎಸ್‌) ಅಧಿಕಾರಿಗಳು ತಿಳಿಸಿದ್ದಾರೆ.

‘ಅವಘಡ ನಡೆದ ದಿನದಿಂದ ಶನಿವಾರದವರೆಗೆ ಅಹಮದಾಬಾದ್‌ ಸರ್ಕಾರಿ ಆಸ್ಪತ್ರೆಗೆ ಒಟ್ಟು 270 ಮೃತದೇಹಗಳನ್ನು ತರಲಾಗಿದೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ವಿಮಾನ ದುರಂತದಲ್ಲಿ 265 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಈ ಮೊದಲು ಹೇಳಿದ್ದರು.

‘ಡಿಎನ್‌ಎ ಪರೀಕ್ಷೆ ಮೂಲಕ ಶವಗಳ ಗುರುತು ಪತ್ತೆಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು’ ಎಂದು ಬಿ.ಜೆ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಧವಳ್ ಗಮೇತಿ ಹೇಳಿದ್ದಾರೆ.

2023ರಲ್ಲಿ ಸಮಗ್ರ ತಪಾಸಣೆ: ದುರಂತಕ್ಕೀಡಾದ ವಿಮಾನದ ನಿರ್ವಹಣೆಗೆ ಸಂಬಂಧಿಸಿದ ಸಮಗ್ರ ತಪಾಸಣೆ 2023ರ ಜೂನ್‌ನಲ್ಲಿ ನಡೆದಿತ್ತು. ಮುಂದಿನ ನಿಗದಿತ ತಪಾಸಣೆ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಬೇಕಿತ್ತು ಎಂದು ಏರ್‌ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಸಮಿತಿಯಲ್ಲಿ ಇರುವವರು...

ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಅಹಮದಾಬಾದ್ ಪೊಲೀಸ್ ಕಮಿಷನರ್, ಭಾರತೀಯ ವಾಯುಪಡೆಯ ತಪಾಸಣಾ ಮತ್ತು ಸುರಕ್ಷತೆಯ ಮಹಾನಿರ್ದೇಶಕರು, ಗುಪ್ತಚರ ನಿರ್ದೇಶನಾಲಯದ ವಿಶೇಷ ನಿರ್ದೇಶಕರು, ವಿಧಿ ವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಅಲ್ಲದೆ ಗುಜರಾತ್ ಗೃಹ ಇಲಾಖೆ, ಗುಜರಾತ್ ವಿಪತ್ತು ನಿರ್ವಹಣೆ ಪ್ರಾಧಿಕಾರ, ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ಹಾಗೂ ಡಿಜಿಸಿಎ ಪ್ರತಿನಿಧಿಗಳು ಉನ್ನತ ಮಟ್ಟದ ಸಮಿತಿಯ ಭಾಗವಾಗಿದ್ದಾರೆ.

ನಿಖೆಯಲ್ಲಿ ಯಾರು ಭಾಗಿ?

ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ), ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಅಹಮದಾಬಾದ್‌ ಪೊಲೀಸರ ಅಪರಾಧ ವಿಭಾಗ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಇತರ ಸಂಸ್ಥೆಗಳು ತನಿಖೆಯಲ್ಲಿ ಭಾಗಿಯಾಗಿವೆ. ಎನ್‌ಐಎ ಅಧಿಕಾರಿಗಳೂ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಎಎಐಬಿ, ದುರಂತದ ದಿನವೇ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಸಂಸ್ಥೆಯ ನಿರ್ದೇಶಕರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು.

ದಿನದ ಬೆಳವಣಿಗೆ

l ವಿಮಾನ ದುರಂತದಲ್ಲಿ ಮೃತಪಟ್ಟ 11 ಮಂದಿಯ ಡಿಎನ್‌ಎ ಇದುವರೆಗೆ ಸಂಬಂಧಿಕರೊಂದಿಗೆ ಹೊಂದಾಣಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ

l ಅಪಘಾತದಲ್ಲಿ ಹಾನಿಗೊಳಗಾದ ಬಿ.ಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡವನ್ನು ಎಐಐಬಿ ತನಿಖಾಧಿಕಾರಿಗಳು ಪರಿಶೀಲಿಸಲಿರುವುದರಿಂದ ಅಲ್ಲಿನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ

l ದುರಂತದಲ್ಲಿ ಬಲಿಯಾದ ತನ್ನ ದೇಶದ ಪ್ರಜೆಗಳ ಕುಟುಂಬದ ಸದಸ್ಯರಿಗೆ ನೆರವು ನೀಡಲು ಬ್ರಿಟನ್‌ ಸರ್ಕಾರ, ಅಹಮದಾಬಾದ್‌ ವಿಮಾನ ನಿಲ್ದಾಣದ ಸಮೀಪದ ಹೋಟೆಲ್‌ನಲ್ಲಿ ಸಹಾಯ ಕೇಂದ್ರ ಆರಂಭಿಸಿದೆ.

l ತನಿಖೆ ನಡೆಸುತ್ತಿರುವ ವಿವಿಧ ಸಂಸ್ಥೆಗಳಿಗೆ ನೆರವಾಗಲು ದುರಂತ ನಡೆದ ಸ್ಥಳದಲ್ಲಿ ಎನ್‌ಎಸ್‌ಜಿ ಕಮಾಂಡೊಗಳನ್ನು ನಿಯೋಜಿಸಲಾಗಿದೆ

l ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಹಮದಾಬಾದ್‌ನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿಯಾದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.