ರಾಜನಾಥ ಸಿಂಗ್
–ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ತಯಾರಿಕಾ ಘಟಕವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಡಿಯೊ ಕಾನ್ಫರೆನ್ಸ್ ಮೂಲಕ ಇಂದು (ಭಾನುವಾರ) ಉದ್ಘಾಟಿಸಿದ್ದಾರೆ.
‘₹300 ಕೋಟಿ ವೆಚ್ಚದ ಈ ಸೌಲಭ್ಯವು ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನ ಪ್ರಮುಖ ಭಾಗವಾಗಿದ್ದು, ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬಿ ಬದ್ಧತೆಯನ್ನು ಪ್ರತಿಪಾದಿಸುತ್ತದೆ’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
‘ಈ ಘಟಕದಲ್ಲಿ ಕ್ಷಿಪಣಿಗಳನ್ನು ತಯಾರಿಸುವುದರ ಜತೆಗೆ ಇತರ ಘಟಕಗಳಿಗೆ ಸಾಮಗ್ರಿಗಳನ್ನು ಸಹ ಪೂರೈಸಲಾಗುತ್ತದೆ. ಇದು ಆತ್ಮ ನಿರ್ಭರ ಭಾರತದ ಕಡೆಗೆ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ ಮತ್ತು ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಿದಂತಾಗಿದೆ’ ಎಂದು ರಕ್ಷಣಾ ಸಚಿವಾಲಯ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಒಟ್ಟು 80 ಎಕರೆ ವಿಸ್ತೀರ್ಣದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದ್ದು, ಘಟಕ ನಿರ್ಮಾಣಕ್ಕೆ ಬೇಕಾದ ಜಾಗವನ್ನು ಉತ್ತರ ಪ್ರದೇಶ ಸರ್ಕಾರವು ಉಚಿತವಾಗಿ ನೀಡಿದೆ. ಮೂರೂವರೆ ವರ್ಷದಲ್ಲಿ ಘಟಕದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
290 ರಿಂದ 400 ಕಿ.ಮೀ ವರೆಗೆ ಗುರಿ ಭೇದಿಸಬಲ್ಲ ದೀರ್ಘ ಶ್ರೇಣಿಯ ಈ ಕ್ಷಿಪಣಿಯು ಗಂಟೆಗೆ 3490 ಕಿ. ಮೀ ವೇಗದಲ್ಲಿ ಸಂಚರಿಸಬಲ್ಲದ್ದಾಗಿದೆ. ಕ್ಷಿಪಣಿಯ ಬಿಡಿ ಭಾಗಗಳನ್ನು ಜೋಡಿಸುವ, ಕ್ಷಿಪಣಿಯನ್ನು ಪರೀಕ್ಷಿಸುವ ಸೌಲಭ್ಯವೂ ಇಲ್ಲಿ ಇರಲಿದೆ. ಈ ಕ್ಷಿಪಣಿಗಳನ್ನು ಭೂಮಿ, ಸಮುದ್ರ ಅಥವಾ ಗಾಳಿಯಿಂದ ಉಡಾಯಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.