ದೇವೇಂದ್ರ ಫಡಣವೀಸ್ ಹಾಗೂ ರಾಹುಲ್ ಗಾಂಧಿ
ಪಿಟಿಐ ಚಿತ್ರಗಳು
ನಾಗಪುರ: ಮಹಾರಾಷ್ಟ್ರದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿರುವುದನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅಲ್ಲಗಳೆದಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಸೋಲು ಸನ್ನಿಹಿತವಾಗಿರುವುದರಿಂದ ಇಂತಹ ಆರೋಪ ಮಾಡಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ನಾಗಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಫಡಣವೀಸ್, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಆತ್ಮಶೋಧನೆ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ, ಅವರ ಪಕ್ಷವು ಪುನಶ್ಚೇತನಗೊಳ್ಳಲು ಸಾಧ್ಯವೇ ಇಲ್ಲ ಎಂದು ಕುಟುಕಿದ್ದಾರೆ.
'ದೆಹಲಿ ಚುನಾವಣೆಯಲ್ಲಿ ಸೋಲುವ ಸೂಚನೆ ಸಿಗುತ್ತಿದ್ದಂತೆ, ರಾಹುಲ್ ಗಾಂಧಿ ಅವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ' ಎಂದು ಫಡಣವೀಸ್ ಆರೋಪಿಸಿದ್ದಾರೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಬುಧವಾರ (ಫೆ.5ರಂದು) ಮತದಾನ ನಡೆದಿದೆ. ಫೆ.8ರಂದು (ಶನಿವಾರ) ಫಲಿತಾಂಶ ಪ್ರಕಟವಾಗಲಿದೆ.
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳು ಹಾಗೂ 288 ವಿಧಾನಸಭಾ ಸ್ಥಾನಗಳಿವೆ.
2024ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರದ ಕ್ಷೇತ್ರಗಳಿಗೆ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಒಟ್ಟು ಐದು ಹಂತಗಳಲ್ಲಿ ಮತದಾನ ನಡೆದಿತ್ತು.
ಅಧಿಕಾರದಲ್ಲಿದ್ದ 'ಮಹಾಯುತಿ' ಮೈತ್ರಿಕೂಟ 17 ಕ್ಷೇತ್ರಗಳಲ್ಲಷ್ಟೇ ಜಯ ಗಳಿಸಿತ್ತು. ಮೈತ್ರಿಕೂಟದ ಭಾಗವಾದ ಬಿಜೆಪಿಗೆ 9 ಕ್ಷೇತ್ರ, ಶಿವಸೇನಾಗೆ 7 ಮತ್ತು ಎನ್‌ಸಿಪಿಗೆ 1 ಸ್ಥಾನ ದಕ್ಕಿದ್ದವು.
ಆದರೆ, ವಿರೋಧ ಪಕ್ಷಗಳ ಮೈತ್ರಿಕೂಟವಾದ 'ಮಹಾ ವಿಕಾಸ ಆಘಾಡಿ' (ಎಂವಿಎ) 30 ಕ್ಷೇತ್ರಗಳನ್ನು ಗೆದ್ದು ಕೊಂಡಿತ್ತು. ಅದರಲ್ಲಿ, ಕಾಂಗ್ರೆಸ್ 13 ಸ್ಥಾನಗಳಲ್ಲಿ, ಶಿವಸೇನಾ (ಯುಬಿಟಿ) 9 ಕಡೆ ಹಾಗೂ ಎನ್‌ಸಿಪಿ (ಎಸ್‌ಪಿ) 8ರಲ್ಲಿ ಗೆಲುವು ಸಾಧಿಸಿತ್ತು. ಉಳಿದೊಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.
ಆದರೆ, ಆರು ತಿಂಗಳ ಬಳಿಕ ಅಂದರೆ, ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಭಾರಿ ಬಹುಮತದೊಂದಿಗೆ, ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಬಿಜೆಪಿಯು 132 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವೆನಿಸಿದರೆ, ಶಿವಸೇನಾ 57, ಎನ್‌ಸಿಪಿ 41 ಕಡೆ ಗೆಲುವು ಸಾಧಿಸಿದೆ. ಶಿವಸೇನಾ (ಯುಬಿಟಿ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಎಸ್‌ಸಿ) ಕ್ರಮವಾಗಿ 20, 16 ಹಾಗೂ 10 ಸ್ಥಾನಗಳಲ್ಲಿ ಮಾತ್ರವೇ ಜಯ ಸಾಧಿಸಿವೆ.
ಹೀಗಾಗಿ, ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ವಿಧಾನಸಭೆ ಚುನಾವಣಾ ಫಲಿತಾಂಶವನ್ನು ಹೋಲಿಸಿ 'ಎಂವಿಎ' ಚುನಾವಣಾ ಅಕ್ರಮದ ಆರೋಪ ಮಾಡಿದೆ. ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ನಡುವಣ ಆರು ತಿಂಗಳ ಅವಧಿಯಲ್ಲಿ 39 ಲಕ್ಷ ಹೆಚ್ಚುವರಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ದೂರಿವೆ.
ಶಿವಸೇನಾ (ಯುಬಿಟಿ) ಹಾಗೂ ಎನ್‌ಸಿಪಿ (ಎಸ್‌ಸಿ) ನಾಯಕರೊಂದಿಗೆ ನವದೆಹಲಿಯಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್, ಹಿಮಾಚಲ ಪ್ರದೇಶದಂತಹ ರಾಜ್ಯದ ಒಟ್ಟು ಜನಸಂಖ್ಯೆಯಷ್ಟು ಹೊಸ ಮತದಾರರನ್ನು ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನೀಡಬೇಕು ಹಾಗೂ ವಿವಾದವನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಫಡಣವೀಸ್, ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆ ಏರಿಕೆಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಚುನಾವಣಾ ಆಯೋಗವು ಈಗಾಗಲೇ ಉತ್ತರ ನೀಡಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.