ಉದಿತ್ ರಾಜ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ‘ತೀರ್ಥ ಯಾತ್ರೆ’ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಉದಿತ್ ರಾಜ್, ಸದ್ಯ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಕರೆದುಕೊಂಡು ಹೋಗುವುದಕ್ಕೆ ಯಾವುದೇ ಯೋಜನೆಗಳಿಲ್ಲ. ಹಾಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಯಾವುದೇ ತಾರತಮ್ಯ ಮಾಡದೆ ಉಚಿತ ‘ತೀರ್ಥ ಯಾತ್ರೆ’ ಯೋಜನೆ ಜಾರಿಗೆ ತರುತ್ತೇವೆ’ ಎಂದು ಹೇಳಿದ್ದಾರೆ.
‘ನಮ್ಮ ಸರ್ಕಾರ ಸ್ವಂತ ಖರ್ಚಿನಲ್ಲಿ ಹಿರಿಯ ನಾಗರಿಕರಿಗೆ ಸಾರನಾಥ ಬುದ್ಧ ವಿಹಾರ, ಬೋಧಗಯಾ ಟೆಂಪಲ್ (ಬಿಟಿ), ನಾಗಪುರ ದೀಕ್ಷಾಭೂಮಿ ಸೇರಿದಂತೆ ಇತರೆ ಬೌದ್ಧ ಧರ್ಮದ ಪವಿತ್ರ ಸ್ಥಳಗಳಿಗೆ ಉಚಿತ ತೀರ್ಥಯಾತ್ರೆಗಳನ್ನು ಆಯೋಜಿಸಲಿದೆ’ ಎಂದು ಉದಿತ್ ರಾಜ್ ಭರವಸೆ ನೀಡಿದ್ದಾರೆ.
2019ರಲ್ಲಿ ಎಎಪಿ ಸರ್ಕಾರವು ದೇಶದಾದ್ಯಂತ ಇರುವ ತೀರ್ಥಯಾತ್ರಾ ಸ್ಥಳಗಳಿಗೆ ಭೇಟಿ ನೀಡಲು ಹಿರಿಯ ನಾಗರಿಕರಿಗಾಗಿ ‘ಮುಖ್ಯಮಂತ್ರಿ ತೀರ್ಥ ಯಾತ್ರಾ ಯೋಜನೆ’ಯನ್ನು ಪ್ರಾರಂಭಿಸಿತ್ತು.
ದೆಹಲಿ ಸರ್ಕಾರವು ಈ ಯೋಜನೆಯ ಅಡಿಯಲ್ಲಿ ಅಯೋಧ್ಯೆ ರಾಮಮಂದಿರ, ದ್ವಾರಕಾಧೀಶ ದೇವಾಲಯ, ಪುರಿ, ವಾರಣಾಸಿ, ವೈಷ್ಣೋದೇವಿ ಧಾಮ, ಅಜ್ಮೀರ್ ಷರೀಫ್, ರಾಮೇಶ್ವರಂ, ಶಿರಡಿ, ತಿರುಪತಿ ಬಾಲಾಜಿ, ಅಮೃತಸರ ಸೇರಿದಂತೆ 15 ಸ್ಥಳಗಳಿಗೆ ಉಚಿತ ತೀರ್ಥಯಾತ್ರೆಯನ್ನು ಆಯೋಜಿಸುತ್ತಿದೆ.
70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.