ನವದೆಹಲಿ: ಚುನಾವಣೆಗೆ ದಿನಗಣನೆ ಆರಂಭವಾಗಿರುವ ದೆಹಲಿಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ₹ 50 ಲಕ್ಷ ಮೌಲ್ಯದ ಸುಮಾರು 20,000 ಬಾಟಲಿ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿರುವುದಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
15,376 ಲೀಟರ್ (ದೇಶಿ ಹಾಗೂ ವಿದೇಶಿ) ಮದ್ಯ ಮತ್ತು 32 ವಾಹನಗಳು ಸೇರಿದಂತೆ ವಶಕ್ಕೆ ಪಡೆದಿರುವ ಸರಕುಗಳ ಒಟ್ಟು ಮೊತ್ತ ಅಂದಾಜು ₹ 1.5 ಕೋಟಿ ಎನ್ನಲಾಗಿದೆ.
ಅಕ್ರಮ ಮದ್ಯ ವಶ ಸಂಬಂಧ ಇದುವರೆಗೆ 52 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹರಿಯಾಣ ಸೇರಿದಂತೆ ನೆರೆ ರಾಜ್ಯಗಳಿಂದ ಮದ್ಯ ಕಳ್ಳಸಾಗಣೆ ಹಾಗೂ ದುಷ್ಕ್ರಮಿಗಳ ಮಾಹಿತಿ ಕಲೆಹಾಕಲು ಅಬಕಾರಿ ಗುಪ್ತಚರ ದಳದ ತಂಡಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಲ್ಲಿ ಜನವರಿ 7ರಿಂದ ಮಾದರಿ ನೀತಿ ಸಂಹಿತಿ ಜಾರಿಯಲ್ಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣಾ ಕಣದಲ್ಲಿ, 699 ಮಂದಿ ಇದ್ದಾರೆ. ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಮೂರು ದಿನಗಳ ಬಳಿಕ (ಫೆ.8ರಂದು) ಫಲಿತಾಂಶ ಪ್ರಕಟವಾಗಲಿದೆ. ಅಬಕಾರಿ ಇಲಾಖೆಯು, ಈ ಎರಡೂ ದಿನ 'ಡ್ರೈ ಡೇ' (ಮದ್ಯ ಮಾರಾಟ ನಿಷೇಧ ದಿನ) ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.