ಎಎಪಿ ಮತ್ತು ಬಿಜೆಪಿ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಸದ್ಯದ ಮತ ಎಣಿಕೆ ಟ್ರೆಂಡ್ ಪ್ರಕಾರ, ಬಿಜೆಪಿಯು ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರಕ್ಕೇರುವ ಸೂಚನೆ ಸಿಕ್ಕಿದೆ. 10 ವರ್ಷಗಳಿಂದ ಆಡಳಿತ ನಡೆಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರವು ಜಾರಿಗೊಳಿಸಿರುವ ಯೋಜನೆಗಳು, ಬಿಜೆಪಿ ಅವಧಿಯಲ್ಲಿಯೂ ಮುಂದುವರಿಯಲಿವೆಯೇ ಎಂಬ ಪ್ರಶ್ನೆ ಇದೀಗ ರಾಷ್ಟ್ರ ರಾಜಧಾನಿಯ ನಾಗರೀಕರ ಮುಂದಿದೆ.
ಈ ಪ್ರಶ್ನೆಗೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಚುನಾವಣಾ ಪೂರ್ವದಲ್ಲೇ ಉತ್ತರಿಸಿದ್ದರು.
ಪಕ್ಷದ ಪ್ರಣಾಳಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ್ದ ನಡ್ಡಾ, ಎಎಪಿ ಸರ್ಕಾರದ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಆದರೆ, ಎಎಪಿ–ಡಿಎ (ಎಎಪಿ ಸೃಷ್ಟಿಸಿದ ವಿಪತ್ತು) ಹರಡಿರುವ ಭ್ರಷ್ಟಾಚಾರವನ್ನು ಕೊನೆಗಾಣಿಸುತ್ತೇವೆ ಎಂದಿದ್ದರು.
ಈ ಚುನಾವಣೆ ಪ್ರಚಾರದ ವೇಳೆ, ಎಎಪಿಯು ಮಹಿಳೆಯರಿಗೆ ₹ 2,100 ಸಹಾಯಧನ ನೀಡುವುದಾಗಿ ಭರವಸೆ ನೀಡಿತ್ತು. ಬಿಜೆಪಿಯು ಅದನ್ನೂ ಮೀರಿ ಮಾಸಿಕ ₹ 2,500 ನೀಡುವ 'ಮಹಿಳಾ ಸಮೃದ್ಧಿ ಯೋಜನೆ' ಜಾರಿಗೊಳಿಸಲಿದೆ ಎಂದು ಚುನಾವಣಾ ಪೂರ್ವದಲ್ಲಿ ನಡ್ಡಾ ಹೇಳಿದ್ದರು. ಕಾಂಗ್ರೆಸ್ ಸಹ ಇಷ್ಟೇ ಮೊತ್ತ ನೀಡುವುದಾಗಿ ಪ್ರಕಟಿಸಿತ್ತು.
60–70 ವಯಸ್ಸಿನ ಹಿರಿಯ ನಾಗರಿಕರಿಗೆ ₹ 2,000 ಹಾಗೂ 70 ವರ್ಷ ಮೇಲ್ಪಟ್ಟವರು, ವಿಧವೆಯರು, ಅಂಗವಿಕಲರಿಗೆ ₹ 2,500 ಪಿಂಚಣಿ ನೀಡುವುದಾಗಿ ಎಎಪಿ ಘೋಷಿಸಿತ್ತು. ಇವುಗಳನ್ನು ಕ್ರಮವಾಗಿ ₹ 2,500 ಹಾಗೂ ₹ 3,000ಕ್ಕೆ ಏರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು.
ಎಎಪಿ ಸರ್ಕಾರ ಆರಂಭಿಸಿರುವ ಮೊಹಲ್ಲಾ ಕ್ಲಿನಿಕ್‌ಗಳು 'ಭ್ರಷ್ಟಾಚಾರ'ದ ತಾಣಗಳಾಗಿವೆ. ಈ ಯೋಜನೆ ಹೆಸರಲ್ಲಿ ₹ 300 ಕೋಟಿ ಹಗರಣ ನಡೆದಿದೆ ಎಂದು ಆರೋಪಿಸಿದ್ದ ನಡ್ಡಾ, ತಮ್ಮ ಪಕ್ಷ ಅಧಿಕಾರಕ್ಕೇರಿದರೆ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದರು.
ಕೊಳಗೇರಿ ನಿವಾಸಿಗಳನ್ನು ತಮ್ಮ ಪಕ್ಷದತ್ತ ಸೆಳೆಯಲು, ₹ 5ಕ್ಕೆ ಪೌಷ್ಟಿಕ ಆಹಾರ ನೀಡುವ 'ಅಟಲ್ ಕ್ಯಾಂಟೀನ್'ಗಳನ್ನು ತೆರೆಯಲಾಗುವುದು ಎಂದಿದ್ದ ನಡ್ಡಾ, ಎಎಪಿ ಸರ್ಕಾರವು, 100 'ಆಮ್ ಆದ್ಮಿ' ಕ್ಯಾಂಟೀನ್‌ಗಳನ್ನು ತೆರೆಯುವುದಾಗಿ ವರ್ಷದ ಹಿಂದೆ ಘೋಷಿಸಿತ್ತು. ಆದರೆ, ಒಂದೇ ಒಂದು ಕ್ಯಾಂಟೀನ್ ಆರಂಭವಾಗಲಿಲ್ಲ ಎಂದು ಆರೋಪಿಸಿದ್ದರು.
ಅಧಿಕಾರದತ್ತ ಬಿಜೆಪಿ
70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಗೆ ಫೆಬ್ರುವರಿ 5ರಂದು ಮತದಾನ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಸದ್ಯ 25 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಬಿಜೆಪಿ 14ರಲ್ಲಿ, ಎಎಪಿ 11 ಕಡೆ ಗೆಲುವು ಸಾಧಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.