ಸಾಂಕೇತಿಕ ಚಿತ್ರ
ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಬರೋಬ್ಬರಿ 26 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ 70 ವಿಧಾನಸಭಾ ಕ್ಷೇತ್ರಗಳ ಪೈಕಿ 48ರಲ್ಲಿ ಗೆದ್ದು, ಭಾರಿ ಬಹುಮತ ಸಾಧಿಸುವ ಮೂಲಕ, ಆಡಳಿತಾರೂಢ ಎಎಪಿ ಎದುರು ಭರ್ಜರಿ ಜಯ ಸಾಧಿಸಿ ಬೀಗಿದೆ. ಈ ಗೆಲುವಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಿರ್ವಹಿಸಿದ ಪಾತ್ರ ಮಹತ್ವದ್ದು.
ನವದೆಹಲಿಯಲ್ಲಿ 'ಪರಿಣಾಮಕಾರಿ ಹಾಗೂ ಜವಾಬ್ದಾರಿಯುತವಾಗಿ' ಆಡಳಿತ ನಡೆಸುವ ಸರ್ಕಾರವನ್ನು ಆಯ್ಕೆ ಮಾಡುವಂತೆ ಆರ್‌ಎಸ್‌ಎಸ್, ಮತದಾರರ ಮನವೊಲಿಸಲು ಸಕಲ ಪ್ರಯತ್ನಗಳನ್ನು ಮಾಡಿದ್ದರ ಪರಿಣಾಮವಾಗಿಯೇ ಬಿಜೆಪಿಗೆ ಅದ್ಭುತ ಗೆಲುವು ದಕ್ಕಿದೆ ಎಂದು ಆ ಸಂಘಟನೆಯ ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷಗಳ ಅಬ್ಬರ ಪ್ರಚಾರದ ನಡುವೆ, ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಮೌನವಾಗಿಯೇ ಜಾಗೃತಿ ಅಭಿಯಾನ ನಡೆಸಿದರು. ದೆಹಲಿಯಾದ್ಯಂತ ಸಾವಿರಾರು ಸಭೆಗಳನ್ನು ಸಂಘಟಿಸಿದರು. ಸ್ವಚ್ಛತೆ, ಕುಡಿಯುವ ನೀರು, ಆರೋಗ್ಯ, ವಾಯುಮಾಲಿನ್ಯ, ಯಮುನಾ ನದಿ ಶುದ್ಧೀಕರಣದಂತಹ ಗಂಭೀರ ವಿಚಾರಗಳನ್ನು ಸಾರ್ವಜನಿಕರ ಮುಂದಿಟ್ಟು ಚರ್ಚಿಸಿದರು. ಹಾಗೆಯೇ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಎಎಪಿ ಪಕ್ಷವು, ಚುನಾವಣಾಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ದಶಕದ ಅಧಿಕಾರಾವಧಿಯಲ್ಲಿ ನಡೆಸಿದ ಭ್ರಷ್ಟಾಚಾರದ ಕುರಿತು ಜನರಿಗೆ ಮನದಟ್ಟು ಮಾಡಿಕೊಡುವ ಮೂಲಕ, 'ದೆಹಲಿ ಆಡಳಿತ ಮಾದರಿ' ಕುರಿತು ಉನ್ಮಾದವನ್ನು ಇಳಿಸಿದರು. ದೆಹಲಿಯಲ್ಲಿರುವ ಅಕ್ರಮ ವಲಸಿಗರ ಬಗ್ಗೆಯೂ ಚರ್ಚಿಸಲಾಯಿತು ಎಂದು ಹೇಳಿವೆ.
'ದ್ವಾರಕಾವೊಂದರಲ್ಲೇ ಕನಿಷ್ಠ 500 ಡ್ರಾಯಿಂಗ್ ರೂಮ್ (ಸಣ್ಣ ಗುಂಪು) ಸಭೆಗಳನ್ನು ನಡೆಸಲಾಯಿತು. ಜನರನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನಷ್ಟೇ ಇಂತಹ ಸಭೆಗಳಲ್ಲಿ ಸ್ವಯಂಸೇವಕರು ಚರ್ಚಿಸಿದರು. ಅವರು ನಿರ್ದಿಷ್ಟವಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಮತ ನೀಡುವಂತೆ ಸ್ಪಷ್ಟವಾಗಿ ಕೇಳಲಿಲ್ಲ. ಬದಲಾಗಿ, ಪರಿಣಾಮಕಾರಿ ಹಾಗೂ ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ ಅರಿವು ಮೂಡಿಸಿದರು' ಎಂದು ವಿವರಿಸಿವೆ.
ಚುನಾವಣಾ ಕಾವು ಆರಂಭವಾಗುವ ಒಂದು ತಿಂಗಳ ಮೊದಲೇ, ಆರ್‌ಎಸ್‌ಎಸ್‌ನ ಅಭಿಯಾನ ಆರಂಭವಾಗಿತ್ತು ಎಂದಿರುವ ಮೂಲಗಳು, ಎಎಪಿಗೆ ಭಾರಿ ಬೆಂಬಲವಿದೆ ಎಂದು ಹೇಳಲಾಗಿದ್ದ ಕೊಳಗೇರಿಗಳು ಹಾಗೂ ಅನಧಿಕೃತ ಕಾಲೊನಿಗಳಲ್ಲಿಯೂ ಸಭೆಗಳನ್ನು ನಡೆಸಲಾಗಿತ್ತು. ಅಷ್ಟೇ ಅಲ್ಲ, ಸಮಾನ ಮನಸ್ಕ ವ್ಯಕ್ತಿಗಳು ಹಾಗೂ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡಲಾಗಿತ್ತು ಎಂದು ಮಾಹಿತಿ ನೀಡಿವೆ.
ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್, ಈ ಹಿಂದೆಯೂ ಇಂತಹ ಪರಿಣಾಮಕಾರಿ ಕೆಲಸ ಮಾಡಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅಲ್ಪ ಹಿನ್ನಡೆ ಅನುಭವಿಸಿದ್ದರೂ, ಹರಿಯಾಣ ಹಾಗೂ ಮಹಾರಾಷ್ಟ್ರ ಚುನಾವಣೆ ಅತ್ಯುತ್ತಮ ಸಾಧನೆ ಮಾಡಿತ್ತು. ಎರಡೂ ರಾಜ್ಯಗಳಲ್ಲಿ ಆರ್‌ಎಸ್‌ಎಸ್ ಇಂತಹ ತಂತ್ರ ಅನುಸರಿಸಿತ್ತು.
ಹಾಗಾಗಿ, ಬಿಜೆಪಿಯು ದೆಹಲಿಯಲ್ಲಿ ಆರ್‌ಎಸ್‌ಎಸ್ ಜೊತೆಗೂಡಿಯೇ ಬೃಹತ್ ಪ್ರಚಾರ ನಡೆಸಿತ್ತು.
ತೆರೆಯ ಹಿಂದೆ ಜವಾಬ್ದಾರಿ ನಿಭಾಯಿಸುವುದರಲ್ಲಿ ವಿಶ್ವಾಸ ಇರಿಸಿರುವ ಆರ್‌ಎಸ್‌ಎಸ್, ಶ್ರೇಯಕ್ಕಾಗಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಮೂಲಗಳು ಪ್ರತಿಪಾದಿಸಿವೆ.
ಕಳೆದೆರಡು ಚುನಾವಣೆಗಳಲ್ಲಿ ಕ್ರಮವಾಗಿ, ಮೂರು ಹಾಗೂ ಎಂಟು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಸಲ ಐವತ್ತರ ಸಮೀಪಕ್ಕೆ ಬಂದು ನಿಂತಿದೆ.
2015 ಹಾಗೂ 2020ರಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ಗೆದ್ದು ಬೀಗಿದ್ದ ಎಎಪಿಗೆ, ಈ ಸಲ ಸಿಕ್ಕಿರುವುದು 22 ಸ್ಥಾನಗಳಷ್ಟೇ. ಅಲ್ಲದೆ, ಮುಖಸ್ಥ ಅರವಿಂದ ಕೇಜ್ರಿವಾಲ್, ಪ್ರಮುಖ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಸೋಮನಾಥ್ ಭಾರ್ತಿ, ಸೌರಭ್ ಭಾರದ್ವಾಜ್ ಅವರಂತಹ ಘಟಾನುಘಟಿ ನಾಯಕರೇ ಸೋಲು ಕಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸತತ ಎರಡು ಬಾರಿ ಸೆಡ್ಡು ಹೊಡೆದಿದ್ದ ಆಪ್‌ಗೆ ಇದರಿಂದ ತೀವ್ರ ಮುಜುಗರವಾಗಿದೆ.
ಈ ಫಲಿತಾಂಶದ ಫಲವಾಗಿ ಬಿಜೆಪಿಯು ಎರಡೂವರೆ ದಶಕದ ಬಳಿಕ ದೆಹಲಿ ಗದ್ದುಗೆ ಏರಿದರೆ, ಎಎಪಿಯು ಮೊದಲ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.