ADVERTISEMENT

ದೆಹಲಿಯ ಮುಂದಿನ ಸಿಎಂ ಯಾರು? ಕೇಜ್ರಿವಾಲ್ ಎದುರು ಗೆದ್ದ ಪರ್ವೇಶ್ ಹೇಳಿದ್ದೇನು?

ಪಿಟಿಐ
Published 8 ಫೆಬ್ರುವರಿ 2025, 11:53 IST
Last Updated 8 ಫೆಬ್ರುವರಿ 2025, 11:53 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ನವದೆಹಲಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಪಕ್ಷದ ಹಿರಿಯ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪರ್ವೇಶ್‌ ವರ್ಮಾ ಹೇಳಿದ್ದಾರೆ.

ಪರ್ವೇಶ್‌ ಅವರು ಎಎಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ನವದೆಹಲಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.

ADVERTISEMENT

70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದೆ. 48 ಸ್ಥಾನಗಳಲ್ಲಿ ಮುನ್ನಡೆ (41 ಜಯ) ಸಾಧಿಸಿರುವ ಬಿಜೆಪಿ ಭಾರಿ ಬಹುಮತ ಸಾಧಿಸಿದೆ. ಮಾಜಿ ಮಖ್ಯಮಂತ್ರಿ ಸಾಹಿಬ್‌ ಸಿಂಗ್‌ ವರ್ಮಾ ಅವರ ಪುತ್ರ ಪರ್ವೇಶ್‌ ಈ ಜಯವನ್ನು, 'ರಾಷ್ಟ್ರ ರಾಜಧಾನಿಯ ಜನರ ಗೆಲುವು' ಎಂದು ಬಣ್ಣಿಸಿದ್ದಾರೆ.

'ಇದು ಕೇವಲ ಗೆಲುವಲ್ಲ. ಸುಳ್ಳನ್ನು ತ್ಯಜಿಸಿ ಸತ್ಯವನ್ನು, ಗಿಮಿಕ್‌ಗಳ ಬದಲು ಸಮರ್ಥ ಆಡಳಿತವನ್ನು, ವಂಚನೆಯ ಬದಲು ಅಭಿವೃದ್ಧಿಯನ್ನು ಆಯ್ಕೆ ಮಾಡಿದ ದೆಹಲಿ ಜನರ ಗೆಲುವು. ನಮ್ಮ ಮೇಲೆ ಭರವಸೆ ಇಟ್ಟ ಪ್ರತಿಯೊಬ್ಬ ಮತದಾರನಿಗೂ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.

'ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾ‌ಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬಲಿಷ್ಠ ನಾಯಕತ್ವದಲ್ಲಿ, ದೆಹಲಿಯಲ್ಲಿ ನಿಜವಾದ ಬದಲಾವಣೆಯನ್ನು ತರಲು ಅವಿರತವಾಗಿ ಶ್ರಮಿಸಲಿದ್ದೇವೆ. ಈ ಜನಾದೇಶವು, ಜನರು ಪ್ರಾಮಾಣಿಕ, ಪಾರದರ್ಶಕ ಮತ್ತು ಅಭಿವೃದ್ಧಿಗೆ ಪೂರಕವಾದ ರಾಜಕಾರಣವನ್ನು ಬಯಸುತ್ತಾರೆ ಎಂಬ ಸಂದೇಶವನ್ನು ನೀಡಿದೆ. ಸೇವೆ ಮಾಡುವ ನಮ್ಮ ಬದ್ಧತೆಯು ಅಚಲವಾಗಿದೆ' ಎಂದು ತಿಳಿಸಿದ್ದಾರೆ.

ಪಶ್ಚಿಮ ದೆಹಲಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ವರ್ಮಾ, 'ದೆಹಲಿ ಪಾಲಿಗೆ ಹೊಸ ಅಧ್ಯಾಯ ಆರಂಭವಾಗಿದೆ. ಎಲ್ಲರೂ ಒಟ್ಟಾಗಿ, ಉಜ್ವಲ ಭವಿಷ್ಯ ನಿರ್ಮಿಸೋಣ' ಎಂದು ಕರೆ ನೀಡಿದ್ದಾರೆ.

ನವದೆಹಲಿ ಕ್ಷೇತ್ರದಲ್ಲಿ 2013, 2015 ಹಾಗೂ 2020ರಲ್ಲಿ ಗೆಲುವು ಸಾಧಿಸಿದ್ದ ಕೇಜ್ರಿವಾಲ್‌, ಈ ಬಾರಿ ವರ್ಮಾ ಎದುರು 4,089 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.