ನವದೆಹಲಿ: ಸಿಂಗಪುರದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ಹೊಸ ಮಾದರಿಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದ್ದು, ಅಲ್ಲಿಂದ ಎಲ್ಲ ರೀತಿಯ ವಿಮಾನ ಸೇವೆಗಳನ್ನು ಕೂಡಲೇ ರದ್ದುಪಡಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಹೊಸ ವೈರಸ್ ಮಾದರಿಯು ಭಾರತದಲ್ಲಿ ಮೂರನೇ ಅಲೆಯ ರೂಪದಲ್ಲಿ ವ್ಯಾಪಿಸಬಹುದಾಗಿದೆ ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.
'ಸಿಂಗಪುರದಲ್ಲಿ ಪತ್ತೆಯಾಗಿರುವ ಹೊಸ ಸ್ವರೂಪದ ಕೊರೊನಾ ವೈರಸ್ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. ಅದು ಮೂರನೇ ಅಲೆಯ ರೂಪದಲ್ಲಿ ದೆಹಲಿಯನ್ನು ಪ್ರವೇಶಿಸಬಹುದಾಗಿದೆ. ಕೇಂದ್ರ ಸರ್ಕಾರವನ್ನು ಕೇಳುವುದೇನೆಂದರೆ: 1. ಸಿಂಗಪುರದ ಜೊತೆಗಿನ ಎಲ್ಲ ವಿಮಾನ ಸೇವೆಗಳನ್ನು ಕೂಡಲೇ ರದ್ದುಪಡಿಸಿ. 2. ಮಕ್ಕಳಿಗೆ ಪರ್ಯಾಯವಾಗಿ ನೀಡಬಹುದಾದ ಲಸಿಕೆಗೆ ಸಂಬಂಧಿಸಿದ ಕಾರ್ಯವನ್ನು ಆದ್ಯತೆಯಾಗಿ ಪರಿಗಣಿಸಿ' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ 24 ಗಂಟೆಗಳ ಅಂತರದಲ್ಲಿ ದೆಹಲಿಯಲ್ಲಿ ಕೋವಿಡ್–19 ದೃಢಪಟ್ಟ 4,482 ಪ್ರಕರಣಗಳು ದಾಖಲಾಗಿವೆ ಹಾಗೂ 265 ಮಂದಿ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.