
ನವದೆಹಲಿ: 'ಡಿಜಿಟಲ್ ಅರೆಸ್ಟ್' ನೆಪದಲ್ಲಿ ವೃದ್ಧ ವೈದ್ಯ ದಂಪತಿಯಿಂದ ಬರೋಬ್ಬರಿ ₹14 ಕೋಟಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯಲ್ಲಿ ವಾಸಿಸುತ್ತಿರುವ ದಂಪತಿಗೆ ಡಿಜಿಟಲ್ ಅರೆಸ್ಟ್ ನೆಪದಲ್ಲಿ ಕರೆ ಮಾಡಿದ್ದ ಸೈಬರ್ ವಂಚಕರು, ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಬೆದರಿಸಿದ್ದರು. ದಂಪತಿಗೆ ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ ಎಂದು ಹೇಳಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಡಿಯೊ ಕಾಲ್ ಮೂಲಕವೂ ದಂಪತಿಗೆ ಕಿರುಕುಳ ನೀಡಿದ್ದಾರೆ. ದಂಪತಿಯಿಂದ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಲವು ಬಾರಿ ₹ 14 ಕೋಟಿ ವರ್ಗಾಯಿಸಿಕೊಂಡಿದ್ದಾರೆ.
ವೈದ್ಯ ದಂಪತಿ ಅಮೆರಿಕದಿಂದ ಭಾರತಕ್ಕೆ ಹಿಂದಿರುಗಿದ್ದರು. 2016ರಿಂದ ಕೈಲಾಶ್‌ನಲ್ಲಿ ವಾಸಿಸುತ್ತಿದ್ದರು. ಅವರ ಮಕ್ಕಳು ವಿದೇಶದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 24ರಿಂದ ಜನವರಿ 9ರವರೆಗೆ ನಿರಂತರವಾಗಿ ವಿಡಿಯೊ ಕಾಲ್ ಮತ್ತು ದೂರವಾಣಿ ಮೂಲಕ ವೃದ್ಧ ದಂಪತಿಗೆ ಬೆದರಿಕೆ ಹಾಕಿ, ಡಿಜಿಟಲ್ ಅರೆಸ್ಟ್‌ನಲ್ಲಿರಿಸಿದ್ದರು. ಆರೋಪಿಗಳು ವೃದ್ಧ ದಂಪತಿಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 9ರಂದು ದಂಪತಿ ತಮಗಾದ ವಂಚನೆಯನ್ನು ಅರಿತು ಪೊಲೀಸರನ್ನು ಸಂಪರ್ಕಸಿ, ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.