ADVERTISEMENT

Delhi Results: ಕಳೆಗುಂದಿದ ಕೇಜ್ರಿವಾಲ್ 'ಕ್ರೇಜ್'; ಎಎಪಿ ಸೋಲಿಗೆ ಕಾರಣಗಳೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2025, 12:58 IST
Last Updated 8 ಫೆಬ್ರುವರಿ 2025, 12:58 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

(ಪಿಟಿಐ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಆಡಳಿತರೂಢ ಆಮ್ ಆದ್ಮಿ ಪಕ್ಷವು (ಎಎಪಿ) ನೆಲಕಚ್ಚಿದೆ.

ADVERTISEMENT

70 ಸದಸ್ಯ ಬಲದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, 26 ವರ್ಷಗಳ ಬಳಿಕ ಅಧಿಕಾರ ಹಿಡಿಯಲು ಸಜ್ಜಾಗಿದೆ.

ಮತ್ತೊಂದೆಡೆ ಎಎಪಿ 22 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಹಿನ್ನಡೆಗೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಸೋಲಿನ ಆಘಾತ ಎದುರಿಸಿರುವುದು ಪಕ್ಷವು ತೀವ್ರ ಮುಜುಗರಕ್ಕೊಳಗಾಗಿದೆ.

ಎಎಪಿ ಸೋಲಿಗೆ ಪ್ರಮುಖ ಕಾರಣಗಳೇನು?

ವಿಶ್ಲೇಷಕರ ಪ್ರಕಾರ, ಆಡಳಿತದಲ್ಲಿರುವ ಎಎಪಿ ನಾಯಕರ ವಿರುದ್ಧದ ನಿರಂತರವಾಗಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.

ಕಳಪೆ ಮೂಲಸೌಕರ್ಯ ಮತ್ತು ಕೆಟ್ಟ ಆಡಳಿತವು ಎಎಪಿಗೆ ಮುಳುವಾಗಿ ಪರಿಣಮಿಸಿದೆ. ಎಎಪಿ ನಾಯಕರು ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೆ ನಿರಂತರ ವಾಕ್ಸಮರದಲ್ಲಿ ಭಾಗಿಯಾಗಿದ್ದರು. ಮತ್ತೊಂದೆಡೆ ಬಿಜೆಪಿ ಉತ್ಸಾಹದೊಂದಿಗೆ ಪ್ರಚಾರದಲ್ಲಿ ಭಾಗವಹಿಸಿತ್ತು. ಇದು ಫಲಿತಾಂಶದಲ್ಲಿ ಎದ್ದು ಕಾಣಿಸುತ್ತಿದೆ.

2015 ಹಾಗೂ 2020ರ ವಿಧಾನಸಭೆ ಚುನಾವಣೆಗಳಲ್ಲಿ ಎಎಪಿ ಅಭೂತಪೂರ್ವ ಸಾಧನೆ ಮಾಡಿತ್ತು. ಅನುಕ್ರಮವಾಗಿ 67 ಹಾಗೂ 62 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಈಗ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಬೇಕಿದೆ.

ಹಲವು ಜನಪರ ಘೋಷಣೆಗಳನ್ನು ಮಾಡಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೆಚ್ಚಿನ ಜನಪ್ರಿಯತೆ ಸಾಧಿಸಿದ್ದರು. ಆದರೆ ದೆಹಲಿ ಅಬಕಾರಿ ನೀತಿ ಹಗರಣದಂತಹ ಆರೋಪಗಳು ಇಕ್ಕಟ್ಟಿಗೆ ಸಿಲುಕಿಸಿದ್ದವು. ಇದೇ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾಯಿತು.

ದೆಹಲಿ ಸಿಎಂ ಅಧಿಕೃತ ಬಂಗಲೆಯ ನವೀಕರಣದಲ್ಲೂ ಭಾರಿ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿತ್ತು. ನಿರಂತರವಾದ ಭ್ರಷ್ಟಾಚಾರ ಆರೋಪಗಳಿಂದಾಗಿ ಜನಪ್ರಿಯತೆ ಕುಸಿಯಲು ಕಾರಣವಾಯಿತು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇಜ್ರಿವಾಲ್ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನವನ್ನು ಆತಿಶಿ ಅವರಿಗೆ ಬಿಟ್ಟುಕೊಟ್ಟರೂ ಹೆಚ್ಚಿನ ಪ್ರಯೋಜನ ಉಂಟಾಗಲಿಲ್ಲ. 'ಇಂಡಿಯಾ' ಮೈತ್ರಿಕೂಟದೊಂದಿಗಿನ ವಿಶೇಷವಾಗಿಯೂ ಕಾಂಗ್ರೆಸ್ ಪಕ್ಷದೊಂದಿಗಿನ ಭಿನ್ನಾಭಿಪ್ರಾಯವು ಹಿನ್ನಡೆಗೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.