ಎಎಪಿ ಬಿಡುಗಡೆ ಮಾಡಿರುವ ಪೋಸ್ಟರ್
ನವದೆಹಲಿ: ‘ಭ್ರಷ್ಟಾಚಾರಿಗಳು’ ಎಂಬ ಶೀರ್ಷಿಕೆಯೊಂದಿಗೆ 11 ನಾಯಕರ ಭಾವಚಿತ್ರಗಳುಳ್ಳ ಭಿತ್ತಿಪತ್ರವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಬಿಡುಗಡೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾವಚಿತ್ರಗಳು ಈ ಭಿತ್ರಿಪತ್ರದಲ್ಲಿವೆ.
‘ರಾಹುಲ್ ಗಾಂಧಿ ಅವರ ಟೀಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡಿದ್ದ ಮಾರನೇ ದಿನವೇ ಎಎಪಿ ಈ ಭಿತ್ತಿಪತ್ರವನ್ನು ಬಿಡುಗಡೆ ಮಾಡಿರುವುದು ಗಮನಾರ್ಹ.
ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶದ ಸಿ.ಎಂ ಯೋಗಿ ಆದಿತ್ಯನಾಥ, ಬಿಜೆಪಿ ನಾಯಕರಾದ ವಿರೇಂದ್ರ ಸಚ್‌ದೇವ, ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ, ವಿಜೇಂದರ್ ಗುಪ್ತಾ, ರಮೇಶ್ ಬಿಢೂಡಿ ಮತ್ತು ಕಾಂಗ್ರೆಸ್ ಮುಖಂಡರಾದ ಅಜಯ್ ಮಾಕನ್, ಸಂದೀಪ್ ದೀಕ್ಷಿತ್ ಚಿತ್ರಗಳೂ ಇವೆ.
ಭಿತ್ತಿಪತ್ರದ ಮೇಲೆ ಕೇಜ್ರಿವಾಲ್ ಮತ್ತು ಅವರ ಪತ್ನಿ ಸುನಿತಾ ನಡೆದುಬರುತ್ತಿರುವ ಭಂಗಿಯ ಚಿತ್ರವಿದ್ದು, ‘ಕೇಜ್ರಿವಾಲ್‌ರ ಪ್ರಾಮಾಣಿಕತೆ ಭ್ರಷ್ಟಾಚಾರಿಗಳಿಗೆ ಸಮಸ್ಯೆ ತರಲಿದೆ’ ಎಂಬ ಅಡಿಬರಹ ಹೊಂದಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಗೋಪ್ಯ ಒಪ್ಪಂದ ಮಾಡಿಕೊಂಡಿವೆ ಎಂದು ಕೇಜ್ರಿವಾಲ್ ಹಿಂದೆ ಆರೋಪಿಸಿದ್ದರು. ಆದರೆ, ರಾಹುಲ್‌ಗಾಂಧಿ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯಿಸಿಲ್ಲ.
ಭ್ರಷ್ಟರ ಪಟ್ಟಿಯಲ್ಲಿ ರಾಹುಲ್ ಹೆಸರು ಸೇರಿಸಿ ಈಗ ಭಿತ್ತಿಪತ್ರ ಬಿಡುಗಡೆ ಮಾಡಿರುವುದು, ರಾಷ್ಟ್ರೀಯ ಮಟ್ಟದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಮೇಲೆಯೂ ಪರಿಣಾಮ ಬೀರಬಹುದು ಎನ್ನಲಾಗಿದೆ.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ಆಲ್ಕಾ ಲಾಂಬಾ ಅವರು, ‘ಇಂಡಿಯಾ’ ಮೈತ್ರಿಕೂಟ ತೊರೆಯುವಂತೆ ಎಎಪಿಗೆ ಸವಾಲೆಸೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.