ನವದೆಹಲಿ: ದೆಹಲಿ ಚುನಾವಣೆಗೂ ಮುನ್ನ ಭಾರಿ ಪ್ರಮಾಣದಲ್ಲಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಹ್‌ದಾರ, ಜನಕಪುರಿ, ಲಕ್ಷ್ಮೀ ನಗರ ಹಾಗೂ ಇನ್ನಿತರ ಪ್ರದೇಶಗಳ ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರನ್ನು ತೆಗೆದು ಹಾಕಲು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದ್ದಾರೆ.
‘ಶಾಹ್‌ದಾರ ಪ್ರದೇಶದ 11,118 ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಪೈಕಿ 500 ಅರ್ಜಿಗಳಲ್ಲಿ ನಮೂದು ಮಾಡಲಾಗಿರುವ ಹೆಸರನ್ನು ಪರಿಶೀಲಿಸಿದಾಗ ಶೇ 75ರಷ್ಟು ಮಂದಿ ಬದುಕಿರುವುದು ಬೆಳಕಿಗೆ ಬಂದಿದೆ. ಆದರೆ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.
‘ಕಳೆದ ಚುನಾವಣೆಯಲ್ಲಿ ಶಾಹ್‌ದಾರ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿಯು 5 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈಗ ಸುಮಾರು 11 ಸಾವಿರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಈ ಪೈಕಿ ಬಹುತೇಕ ಎಎಪಿಯ ಮತಗಳು’ ಎಂದು ಅವರು ಹೇಳಿದ್ದಾರೆ.
ಪಾರದರ್ಶಕತೆಯ ದೃಷ್ಠಿಯಿಂದ ಆ ಎಲ್ಲಾ ಅರ್ಜಿಗಳನ್ನು ಸಂಜೆಯೊಳಗೆ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಕೇಜ್ರಿವಾಲ್ ಚುನಾವಣಾ ಆಯೋಗವನ್ನು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.