ದೆಹಲಿ ಹೈಕೋರ್ಟ್
ನವದೆಹಲಿ: ಮದುವೆಯಾಗುವುದಾಗಿ ನಂಬಿಸಿ 53 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ವ್ಯಕ್ತಿಯೊಬ್ಬನಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ, ವಿಚ್ಛೇದಿತ ಮಹಿಳೆಯನ್ನು ದಾರಿ ತಪ್ಪಿಸುವ ಹಾಗೂ ಆಕೆಗೆ ಸುಳ್ಳು ಭರವಸೆಗಳನ್ನು ನೀಡಿದಂತೆ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಇನ್ನೂ ಬಾಕಿ ಇದ್ದು, ವಾಟ್ಸ್‌ಆ್ಯಪ್ ಚಾಟ್‌ಗಳು ಗಮನಿಸಿದರೆ ಪ್ರಾಥಮಿಕವಾಗಿ ಅರ್ಜಿದಾರರ ವಿರುದ್ಧ ಆರೋಪಿಸಲಾದ ಅಪರಾಧದ ಗಂಭೀರತೆಯನ್ನು ಸೂಚಿಸುತ್ತದೆ. ಈ ಹಂತದಲ್ಲಿ ಜಾಮೀನು ನೀಡಲು ಯಾವುದೇ ಆಧಾರವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆರೋಪಿಯು ಮನೆಗೆ ಬಂದು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಬಲವಂತವಾಗಿ ನನ್ನ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಸಂತ್ರಸ್ತೆ ಮದುವೆಯಾಗುವಂತೆ ಒತ್ತಾಯಿಸಿದಾಗ, ಆರೋಪಿ ವಾಟ್ಸ್‌ಆ್ಯಪ್ ಮೂಲಕ ವಿಚ್ಛೇದನ ಅರ್ಜಿಯ ಪ್ರತಿಯನ್ನು ಆಕೆಗೆ ಕಳುಹಿಸಿದ್ದ. ಶೀಘ್ರದಲ್ಲೇ ತನ್ನ ಹೆಂಡತಿಯನ್ನು ಬಿಟ್ಟು ನಿನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ದೂರುದಾರೆ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮವೊಂದರಲ್ಲಿ ಮೂಲಕ ಇಬ್ಬರಿಗೂ ಪರಿಚಯವಾಗಿದ್ದರು. ಪರಿಚಯದ ವೇಳೆ ನಾನು ಮಾಜಿ ನೌಕಪಡೆಯ ನೌಕರ. 2008ರ ಮುಂಬೈ ದಾಳಿ ವೇಳೆ ತಂಡದ ಭಾಗವಾಗಿ ಕಾರ್ಯನಿರ್ವಹಿಸಿದ್ದೇನೆ. ಇದೀಗ ನಾರ್ಕೋಟಿಕ್ಸ್ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸುಳ್ಳು ಹೇಳಿಕೆಗಳ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ನ್ಯಾಯಾಲಯ ಗಮನಿಸಿದೆ.
ನಾನು ವಿವಾಹಿತ ಎಂದು ಆಕೆಗೆ ಗೊತ್ತಿತ್ತು. ಸಂಬಂಧವು ಒಪ್ಪಿಗೆಯಿಂದ ಕೂಡಿತ್ತು. ಬೆಳೆದ ಮಗನನ್ನು ಹೊಂದಿದ್ದ 53 ವರ್ಷದ ಮಹಿಳೆಗೆ ಎಲ್ಲದರ ಬಗ್ಗೆಯೂ ಅರಿವಿತ್ತು ಎಂದು ಆರೋಪಿಯು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.