ADVERTISEMENT

ಮಹಿಳಾ ಸಮ್ಮಾನ್ ಯೋಜನೆ | AAP ವಿರುದ್ಧ ದೀಕ್ಷಿತ್ ವಂಚನೆ ಆರೋಪ: ತನಿಖೆಗೆ LG ಆದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಡಿಸೆಂಬರ್ 2024, 9:30 IST
Last Updated 28 ಡಿಸೆಂಬರ್ 2024, 9:30 IST
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ
ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ    

ನವದೆಹಲಿ: ‘ಮಹಿಳಾ ಸಮ್ಮಾನ್’ ಯೋಜನೆ ಮೂಲಕ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಮಹಿಳೆಯರಿಗೆ ವಂಚನೆ ಮಾಡುತ್ತಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಆರೋಪ ಕುರಿತು ತನಿಖೆ ನಡೆಸುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಆದೇಶಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ‘ಮಹಿಳಾ ಸಮ್ಮಾನ್’ ಯೋಜನೆ ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಈಚೆಗೆ ಘೋಷಿಸಿದ್ದರು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಸಂದೀಪ್ ದೀಕ್ಷಿತ್, ತನಿಖೆ ನಡೆಸುವಂತೆ ಕೋರಿ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದಿದ್ದರು.

ಈ ವಿಚಾರವಾಗಿ ಲೆಫ್ಟಿನೆಂಟ್ ಗವರ್ನರ್ ಅವರ ಪ್ರಧಾನ ಕಾರ್ಯದರ್ಶಿ ಅವರು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದು, ಮಹಿಳಾ ಸಮ್ಮಾನ್’ ಯೋಜನೆಗೆ ಸಂಬಂಧಿಸಿ ಸರ್ಕಾರೇತರ ವ್ಯಕ್ತಿಗಳಿಂದ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುತ್ತಿರುವ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ.

ADVERTISEMENT

ಸವಲತ್ತುಗಳನ್ನು ನೀಡುವಂತೆ ನೆಪದಲ್ಲಿ ನಾಗರಿಕರ ಗೌಪ್ಯತೆಯನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಲೆಫ್ಟಿನೆಂಟ್ ಗವರ್ನರ್ ಅವರು ಆದೇಶಿಸಿದ್ದಾರೆ.

‘ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು ₹1 ಸಾವಿರ ನೆರವು ನೀಡುವ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್‌ ಯೋಜನೆ’ ತಕ್ಷಣ ಜಾರಿಗೊಳಿಸಲಾಗುವುದು. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಗೆದ್ದರೆ, ಈ ಮೊತ್ತವನ್ನು ₹2,100ಕ್ಕೆ ಏರಿಕೆ ಮಾಡಲಾಗುವುದು’ ಎಂದು ಅರವಿಂದ ಕೇಜ್ರಿವಾಲ್ ಈಚೆಗೆ ಘೋಷಣೆ ಮಾಡಿದ್ದರು.

ಮಹಿಳಾ ಸಮ್ಮಾನ್‌ ಯೋಜನೆಗೆ ವಿರೋಧ

‘ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದರೆ ಮಹಿಳೆಯರಿಗೆ ತಿಂಗಳಿಗೆ ₹1,100 ನೀಡುವುದಾಗಿ 2022ರಲ್ಲಿ ಎಎಪಿ ಹೇಳಿತ್ತು. ಆದರೆ, ಇನ್ನೂವರೆಗೂ ಹಣ ನೀಡಿಲ್ಲ. ಈಗ ದೆಹಲಿಯಲ್ಲಿಯೂ ಇಂಥದ್ದೇ ಯೋಜನೆಯನ್ನು ಘೋಷಿಸಿದೆ. ಇದು ಮಹಿಳೆಯರಿಗೆ ಮಾಡುತ್ತಿರುವ ‘ದ್ರೋಹ’ ಎಂದು ಬಿಜೆಪಿ ಆರೋಪಿಸಿದೆ.

ಅಶೋಕ ರಸ್ತೆಯಿಂದ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರ ಮನೆಯವರೆಗೆ ಬಿಜೆಪಿ ಮಹಿಳಾ ಮೋರ್ಚಾವು ಪ್ರತಿಭಟನಾ ಮೆರವಣಿಗೆ ನಡೆಸಿದೆ. ‘ತಿಂಗಳಿಗೆ ₹2,100 ನೀಡುವ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್‌ ಯೋಜನೆ’ ಮೂಲಕ ದೆಹಲಿ ಮಹಿಳೆಯರಿಗೂ ಎಎಪಿ ಮೋಸ ಎಸಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದ್ದಾರೆ.ಕೇಜ್ರಿವಾಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.