ನವದೆಹಲಿ: ದೆಹಲಿಯ ಐದು ಖಾಸಗಿ ಶಾಲೆಗಳಿಗೆ ಇಂದು ಬೆಳಿಗ್ಗೆ (ಬುಧವಾರ) ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದ್ವಾರಕಾದ ಸೇಂಟ್ ಥಾಮಸ್, ವಸಂತ್ ಕುಂಜ್‌ನ ವಸಂತ್ ವ್ಯಾಲಿ, ಹೌಜ್ ಖಾಸ್‌ನಲ್ಲಿರುವ ಮದರ್ ಇಂಟರ್‌ನ್ಯಾಷನಲ್, ಲೋಧಿ ಎಸ್ಟೇಟ್‌ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯ ಹಾಗೂ ಪಶ್ಚಿಮ ವಿಹಾರ್‌ನಲ್ಲಿರುವ ರಿಚ್‌ಮಂಡ್ ಗ್ಲೋಬಲ್ ಶಾಲೆಗೆ ಇಂದು ಬೆಳಿಗ್ಗೆ ಇ– ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇಂಟ್ ಥಾಮಸ್ ಶಾಲೆಗೆ ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಬಾಂಬ್ ಬೆದರಿಕೆ ಇದಾಗಿದೆ. ನಗರದ ಶಾಲೆಗಳಿಗೆ ಹತ್ತು ಬಾಂಬ್ ಬೆದರಿಕೆಯ ಇಮೇಲ್‌ಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸತತ ಮೂರನೇ ದಿನವೂ ಶಾಲೆಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಬೆದರಿಕೆ ಹಾಕಲಾಗುತ್ತಿದ್ದು, ಕಳೆದ ಎರಡು ದಿನಗಳಲ್ಲಿ ಬಂದಿದ್ದ ಬೆದರಿಕೆ ಕರೆಗಳು ಹುಸಿ ಬಾಂಬ್ ಬೆದರಿಕೆ ಕರೆಗಳಾಗಿದ್ದವು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೆಹಲಿ ಪೊಲೀಸ್, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಸೈಬರ್ ತಜ್ಞರ ತಂಡಗಳು ಶಾಲೆಗಳಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿತ್ತು. ಆದರೆ ಯಾವುದೇ ಅನುಮಾಸ್ಪಾದ ವಸ್ತುಗಳು ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಈ ಶಾಲೆಯಲ್ಲಿದ್ದವರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.