ಅಮಿತ್ ಶಾ
ಪಿಟಿಐ ಚಿತ್ರ
ಕೊಯಮತ್ತೂರು/ಚೆನ್ನೈ (ತಮಿಳುನಾಡು): ‘ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಭರವಸೆ ನೀಡಿದ್ದಾರೆ.
ಮೂರು ಜಿಲ್ಲೆಗಳ ಬಿಜೆಪಿ ಕಚೇರಿ ಗಳನ್ನು ಉದ್ಘಾಟಿಸಿದ ನಂತರ ಕೊಯಮತ್ತೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನ್ಯಾಯಯುತ ಮತ್ತು ಪಾರದರ್ಶಕ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸುವ ಸಂಬಂಧ ಜಂಟಿ ಮನವಿ ಸಲ್ಲಿಸಲು ಮಾರ್ಚ್ 5 ರಂದು ಸರ್ವಪಕ್ಷ ಸಭೆ ಕರೆದಿರುವ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ ಮರು ದಿನವೇ ಶಾ ಅವರಿಂದ ಈ ಸ್ಪಷ್ಟನೆ ಬಂದಿದೆ.
ಕೇವಲ ಜನಸಂಖ್ಯೆಯ ಆಧಾರದ ಮೇಲೆ ಮತ್ತು ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನು ಪ್ರಸ್ತುತ 543ಕ್ಕೆ ಸೀಮಿತಗೊಳಿಸಿದರೆ ತಮಿಳುನಾಡು 8 ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ ಎಂದು ಸ್ಟಾಲಿನ್ ಆತಂಕ ವ್ಯಕ್ತಪಡಿಸಿದ್ದರು.
‘ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳು ಒಂದೇ ಒಂದು ಲೋಕಸಭಾ ಸ್ಥಾನವನ್ನು ಸಹ ಕಳೆದುಕೊಳ್ಳುವುದಿಲ್ಲವೆಂದು ಮೋದಿ ನೇತೃತ್ವದ ಸರ್ಕಾರವು ಈಗಾಗಲೇ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ. ಜನಸಂಖ್ಯೆ ಅನುಪಾತ ಆಧರಿಸಿ, ಮಾಡಲಾಗುವ ಕ್ಷೇತ್ರ ಹಂಚಿಕೆಯಲ್ಲಿ ಈ ರಾಜ್ಯಗಳಿಗೆ ಅನ್ಯಾಯ ವಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಶಾ ಹೇಳಿದರು.
‘ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದರಿಂದ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವು ಮತ್ತಷ್ಟು ಹೆಚ್ಚಾಗಲಿದೆ’ ಎಂದು ಅವರು ಹೇಳಿದರು.
ಪುನರ್ ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಪ್ಪು ಮಾಹಿತಿ ನೀಡುತ್ತಿದ್ದಾರೆ. ತಮಿಳುನಾಡು ಸೇರಿ ದಕ್ಷಿಣದ ಯಾವುದೇ ರಾಜ್ಯವು ಸಂಸತ್ ಪ್ರಾತಿನಿಧ್ಯ ದಲ್ಲಿ ಒಂದೇ ಒಂದು ಸ್ಥಾನ ಕಳೆದುಕೊಳ್ಳುವುದಿಲ್ಲ ಎಂದು ದೃಢವಾಗಿ ಹೇಳುವ ಮೂಲಕ, ಊಹಾಪೋಹಗಳಿಗೆ ತೆರೆ ಎಳೆಯುವ, ದಕ್ಷಿಣದ ರಾಜ್ಯಗಳ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಿದರು.
‘ಕೊಯಮತ್ತೂರಿನಿಂದ ಹಿಡಿದು ದಕ್ಷಿಣದ ಎಲ್ಲ ರಾಜ್ಯಗಳ ಜನರಿಗೆ ನಾನು ಭರವಸೆ ನೀಡುತ್ತೇನೆ, ಮೋದಿ ಅವರು ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ದೇಶದಾದ್ಯಂತ ಒಂದೇ ಒಂದು ಸ್ಥಾನ ಕಡಿಮೆಯಾಗದಂತೆ ನೋಡಿಕೊಳ್ಳುತ್ತಾರೆ. ಎಷ್ಟೇ ಸ್ಥಾನಗಳನ್ನು ಹೆಚ್ಚಿಸಿದರೂ ದಕ್ಷಿಣವು ಹೆಚ್ಚಿನ ಪಾಲು ಹೊಂದಿರುತ್ತದೆ. ಇದರ ಬಗ್ಗೆ ಯಾವುದೇ ಸಂದೇಹ ಪಡುವ ಅಗತ್ಯವಿಲ್ಲ’ ಎಂದು ಶಾ ಹೇಳಿದರು.
‘ಡಿಎಂಕೆಯ ಎಲ್ಲ ನಾಯಕರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ಜನರು ರಾಜ್ಯ ಸರ್ಕಾರದ ಹಲವು ವಿಷಯಗಳಲ್ಲಿ ಬೇಸರಗೊಂಡಿದ್ದಾರೆ. ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಅವರು ಇಲ್ಲಸಲ್ಲದ ವಿಷಯಗಳನ್ನು ಕೈಗೆತ್ತಿಕೊಂಡು, ಜನರ ಹಾದಿ ತಪ್ಪಿಸುವುದರಲ್ಲಿ ನಿರತರಾಗಿದ್ದಾರೆ’ ಎಂದು ಅಮಿತ್ ಶಾ ಟೀಕಿಸಿದರು.
ಭರವಸೆ ನಂತರವೂ ದೂರವಾಗದ ಆತಂಕ
ಪುದುಚೇರಿ ಸೇರಿ ಒಟ್ಟು 130 ಲೋಕಸಭಾ ಸ್ಥಾನಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳ
ಆತಂಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಈ ಹೇಳಿಕೆ ಪೂರ್ಣ ನಿವಾರಿಸಿಲ್ಲ ಎಂದು ವಿಶ್ಲೇಷಿಸಲಾಗಿದೆ.
ಏಕೆಂದರೆ, ಒಟ್ಟು ಫಲವಂತಿಕೆ ದರ (ಟಿಎಫ್‌ಆರ್) 2.1 ಮಿತಿಯನ್ನು ಮೀರಿರುವ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳು ಜನಸಂಖ್ಯಾ ನಿಯಂತ್ರಣದ ಕ್ರಮಗಳನ್ನು ಗಂಭೀರವಾಗಿ ಅನುಷ್ಠಾನಗೊಳಿಸುವವರೆಗೂ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ಮುಂದೂಡಬೇಕೆಂಬುದು ದಕ್ಷಿಣದ ರಾಜ್ಯಗಳ ಬೇಡಿಕೆಯಾಗಿದೆ.
1971ರ ಜನಗಣತಿಯ ಆಧಾರದ ಮೇಲೆ ನಿಗದಿಪಡಿಸಲಾದ ರಾಜ್ಯಗಳಲ್ಲಿನ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳ ‘ಪ್ರಸ್ತುತ ಅನುಪಾತ’ ಮುಂದುವರಿಯಬೇಕೆಂದು ದಕ್ಷಿಣ ರಾಜ್ಯಗಳು ಒತ್ತಾಯಿಸುತ್ತಿವೆ. ಆದರೆ, ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳಲು ಸಿದ್ಧವಾಗಿದೆ ಎಂಬುದನ್ನು ಅಮಿತ್ ಶಾ ಅವರ ಈ ಹೇಳಿಕೆಗಳು ಸ್ಪಷ್ಟಪಡಿಸುತ್ತಿವೆ.
ಅಮಿತ್ ಶಾ ಅವರು ಉಲ್ಲೇಖಿಸಿರುವ ಜನಸಂಖ್ಯಾ ಅನುಪಾತದ ಆಧಾರದ ಸೂತ್ರದ ಪ್ರಕಾರ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯು ಹೆಚ್ಚಳವನ್ನು ಕಂಡರೂ ಉತ್ತರ ಭಾರತದ ರಾಜ್ಯಗಳ ಸ್ಥಾನಗಳ ಸಂಖ್ಯೆಯು ಭಾರಿ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ಇದು ಸಂಸತ್ತಿನಲ್ಲಿ ದಕ್ಷಿಣದ ರಾಜಕೀಯ ಪ್ರಾತಿನಿಧ್ಯವನ್ನು ವ್ಯಾಪಕ ಪ್ರಮಾಣದಲ್ಲಿ ತಗ್ಗಿಸಲಿದೆ.
ಕೇಂದ್ರ ಸರ್ಕಾರದ ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು 1970ರ ದಶಕದಿಂದ ಕಟ್ಟುನಿಟ್ಟಾಗಿ ಪಾಲಿಸಿದ್ದಕ್ಕಾಗಿ ದಕ್ಷಿಣ ರಾಜ್ಯಗಳು ದಂಡ ತೆರಬೇಕಾಗಿದೆ ಎಂದು ಭಾವಿಸಲು ಇದು ಇನ್ನಷ್ಟು ದಾರಿ ಮಾಡಿಕೊಡಲಿದೆ.
ಏನೇ ಆಗಲಿ, ಜನಗಣತಿ ಕಾರ್ಯವನ್ನು ಕೈಗೆತ್ತಿಕೊಳ್ಳುವವರೆಗೆ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವು ಸಾಧ್ಯವಾಗದು. ಜನಗಣತಿ ಈಗಾಗಲೇ ನಾಲ್ಕು ವರ್ಷ ವಿಳಂಬವಾಗಿದೆ.
ಕ್ಷೇತ್ರ ಪುನರ್ ವಿಂಗಡನೆ ವಿಷಯವಾಗಿ ಈ ಹಿಂದೆ ಮಾತನಾಡಿದ್ದ ಸ್ಟಾಲಿನ್, ಪ್ರತಿ ಕುಟುಂಬವೂ ಹೆಚ್ಚು ಮಕ್ಕಳನ್ನು ಹೊಂದಿದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಹೆಚ್ಚಾಗಲಿದೆ. ಇಲ್ಲವಾದಲ್ಲಿ 129 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣ ರಾಜ್ಯಗಳ ಮೇಲೆ ಕ್ಷೇತ್ರ ಪುನರ್ ವಿಂಗಡನೆಯ ತೂಗುಕತ್ತಿ ನೇತಾಡುತ್ತಿದೆ ಎಂದಿದ್ದರು.
ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ. ಆದರೆ 1971ರ ಜನಗಣತಿಯನ್ನು ಈಗಲೂ ಅನುಸರಿಸಲಾಗುತ್ತಿದೆ. ಸದ್ಯದ ಜನಸಂಖ್ಯೆಯನ್ನು ಆಧರಿಸಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಕ್ಷೇತ್ರಗಳನ್ನು ನಿಗದಿಪಡಿಸಬೇಕು ಎಂದು ಸ್ಟಾಲಿನ್ ಕೇಂದ್ರವನ್ನು ಒತ್ತಾಯಿಸಿದ್ದರು.
ಹಣಕಾಸು ಆಯೋಗಗಳು ದಕ್ಷಿಣದ ರಾಜ್ಯಗಳಿಗೆ ನೀಡುತ್ತಿರುವ ಅನುದಾನ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ. ಕ್ಷೇತ್ರ ಪುನರ್ ವಿಂಗಡನೆಯಿಂದ ಕೇಂದ್ರ ತೆರಿಗೆ ಹಂಚಿಕೆ ಪ್ರಮಾಣವೂ ಗಣನೀಯವಾಗಿ ತಗ್ಗುವ ಅಪಾಯವಿದೆ. ಪುದುಚೇರಿಯ ಒಂದು ಕ್ಷೇತ್ರವನ್ನು ಒಳಗೊಂಡು ದಕ್ಷಿಣದ 130 ಕ್ಷೇತ್ರಗಳ ಮೂಲಕ ಈ ರಾಜ್ಯಗಳಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ. ಕಡಿಮೆ ಕ್ಷೇತ್ರಗಳನ್ನು ಹೊಂದಿರುವ ದಕ್ಷಿಣದ ರಾಜ್ಯಗಳನ್ನು ಸದಾ ಆತಂಕದಲ್ಲೇ ಇಡುವ ಹುನ್ನಾರ ನಡೆದಿದೆ ಎಂದು ಸ್ಟಾಲಿನ್ ಆರೋಪಿಸಿದ್ದರು.
ಒಂದೊಮ್ಮೆ ದಕ್ಷಿಣದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾದರೂ, ಅದು ಉತ್ತರದ ರಾಜ್ಯಗಳೊಂದಿಗಿನ ಅನುಪಾತದಲ್ಲಿ ಹಿಂದೆಯೇ ಉಳಿಯಲಿದೆ. 1971ರ ಜನಸಂಖ್ಯೆ ಆಧಾರದಲ್ಲಿ ಬಿಹಾರ ಮತ್ತು ತಮಿಳುನಾಡು ರಾಜ್ಯಗಳು ಸಮನಾಗಿವೆ. ಹೀಗಿದ್ದರೂ ಬಿಹಾರ 40 ಕ್ಷೇತ್ರಗಳನ್ನು ಹಾಗೂ ತಮಿಳುನಾಡು 39 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ ಎಂಬ ಅಂಶವನ್ನು ಅವರು ಉಲ್ಲೇಖಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.