ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ನರೇಂದ್ರ ಮೋದಿ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಗಾಧ ನಾಯಕತ್ವದ ಅನುಭವಗಳೊಂದಿಗೆ ದೇಶವನ್ನು ನಡೆಸಬಲ್ಲ ‘ಅತ್ಯುತ್ತಮ’ ನಾಯಕರಾಗಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಡಿ ಹೊಗಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆಯನ್ನು (ದ್ರೌಪದಿ ಮುರ್ಮು) ಎನ್‌ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿ, ರಾಷ್ಟ್ರಪತಿ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ಮೋದಿಯವರನ್ನು ಅಭಿನಂದಿಸಲೇಬೇಕು’ ಎಂದಿದ್ದಾರೆ.
ಮೋದಿ ನೇತೃತತ್ವದ ಕೇಂದ್ರ ಸರ್ಕಾರ ಕೋಮುವಾದವನ್ನು ಪ್ರಚೋದಿಸುತ್ತಿದೆ ಮತ್ತು ಒಕ್ಕೂಟ ವ್ಯವಸ್ಥೆಗೆ ಶತ್ರುವಿನ ರೀತಿ ವರ್ತಿಸುತ್ತದೆ ಎಂಬ ವಿಪಕ್ಷಗಳ ಆರೋಪಗಳನ್ನು ತಳ್ಳಿಹಾಕಿದ ಅವರು, ‘ಮೂರನೇ ಅವಧಿಯಲ್ಲಿ ಅವರು (ಮೋದಿ) ಪೂರ್ಣ ಬಹುಮತವನ್ನು ಪಡೆಯದಿದ್ದಾಗ, ಪ್ರಾದೇಶಿಕ ಪಕ್ಷಗಳು ಅವರನ್ನು ಬೆಂಬಲಿಸಲು ಒಟ್ಟಾಗಿ ನಿಲ್ಲಬೇಕಾಯಿತು ಎಂದು ವಿವರಿಸಿದ್ದಾರೆ.
‘ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಮೋದಿಗೆ ಆಡಳಿತವನ್ನು ಹೇಗೆ ನಡೆಸಬೇಕೆಂದು ಚೆನ್ನಾಗಿ ತಿಳಿದಿದೆ. ದೇಶವನ್ನು ಮುನ್ನಡೆಸಬಲ್ಲ ಈ ದೇಶದ ಅತ್ಯುತ್ತಮ ನಾಯಕರಾಗಿದ್ದಾರೆ’ ಎಂದು ದೇವೇಗೌಡ ಕೊಂಡಾಡಿದ್ದಾರೆ.
‘ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಮಧ್ಯಮ ವರ್ಗ, ಯುವಕರು, ಮಹಿಳೆಯರು ಸೇರಿದಂತೆ ಇತರರಿಗೆ ಆದ್ಯತೆ ನೀಡಿದ್ದಾರೆ. ಜತೆಗೆ, ದೇಶ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಮುಂದಿನ 5 ವರ್ಷಗಳ ಕಾಲ ಸ್ಥಿರ ಸರ್ಕಾರ ಅಸ್ಥಿತ್ವದಲ್ಲಿರುವುದು ಅಗತ್ಯ. ಹಾಗಾಗಿ ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರ ಸರ್ಕಾರ ಐದು ವರ್ಷ ಆಡಳಿತ ನಡೆಸಲಿದೆ’ ಎಂದು ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮತ್ತು ಇತರ ಯೋಜನೆಗಳಿಗೆ ಘೋಷಿಸಿದ ಅನುದಾನದ ಬಗ್ಗೆ ಪ್ರಸ್ತಾಪಿಸಿದ್ದರು. ಇದು ವಿಪಕ್ಷದವರಿಗೆ ನುಂಗಲಾರದ ತುತ್ತಾಗಿದೆ ಎಂದು ದೇವೇಗೌಡ ಕಿಡಿಕಾರಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದೂ ಆರೋಪಿಸಿದ ಅವರು, ‘ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.