
ಇಂಡಿಗೊ ವಿಮಾನ
ನವದೆಹಲಿ/ಮುಂಬೈ: ‘ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು ಮಂಗಳವಾರ ಸೂಚಿಸಿದರು.
‘ಚಳಿಗಾಲದಲ್ಲಿ ಹಾರಾಟ ನಡೆಸುವ ಮಾರ್ಗಗಳಲ್ಲಿ ಶೇ 5ರಷ್ಟು ವಿಮಾನಗಳ ಹಾರಾಟವನ್ನು ಕಡಿತ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಇಂಡಿಗೊ ಸಂಸ್ಥೆಗೆ ಸೋಮವಾರ ಸೂಚನೆ ನೀಡಿತ್ತು. ವಿಮಾನಗಳ ಹಾರಾಟವನ್ನು ಕಡಿತ ಮಾಡಿದ ಬಳಿಕ, ಪರಿಷ್ಕೃತ ವೇಳಾಪಟ್ಟಿಯನ್ನು ಬುಧವಾರದ (ಡಿ.10) ಒಳಗೆ ನೀಡಬೇಕು ಎಂದೂ ಹೇಳಿತ್ತು.
‘ವಿಮಾನ ಹಾರಾಟ ರದ್ದಾಗುವ ಪ್ರಮಾಣವನ್ನು ಕಡಿತ ಮಾಡಲು, ಇಂಡಿಗೊ ಕಾರ್ಯಾಚರಣೆಯನ್ನು ಸ್ಥಿರತೆಗೆ ತರಲು ಈ ಆದೇಶ ನೀಡಲಾಗಿದೆ’ ಎಂದು ಸಚಿವ ನಾಯ್ಡು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಿಕ್ಕಟ್ಟಿನ ನಿರ್ವಹಣೆ ಕುರಿತು ಮಾಹಿತಿ ನೀಡುವಂತೆ ಇಂಡಿಗೊ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಸಚಿವಾಲಯವು ನೋಟಿಸ್ ನೀಡಿತ್ತು. ಅದರಂತೆ ಮಂಗಳವಾರ ಪೀಟರ್ ಅವರು ಸಚಿವರು ಮತ್ತು ಸಚಿವಾಲಯದ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಿದರು.
‘ಟಿಕೆಟ್ ದರ ನಿಗದಿ, ಪ್ರಯಾಣಿಕರಿಗೆ ಅನುಕೂಲ ಒದಗಿಸುವುದು ಸೇರಿದಂತೆ ಸಚಿವಾಲಯವು ನೀಡುವ ಎಲ್ಲ ನಿರ್ದೇಶನಗಳನ್ನು ಪಾಲಿಸಬೇಕು. ಇದಕ್ಕೆ ವಿನಾಯಿತಿ ಇಲ್ಲ’ ಎಂದು ಸೂಚಿಸಲಾಗಿದೆ ಎಂದು ಸಚಿವ ನಾಯ್ಡು ತಿಳಿಸಿದರು.
ದೇಶದಲ್ಲಿ ಇಂಡಿಗೊದ ಏಕಸ್ವಾಮ್ಯವನ್ನು ತಪ್ಪಿಸುವುದಕ್ಕಾಗಿ ವಿಮಾನಗಳ ಹಾರಾಟವನ್ನು ಕಡಿತ ಮಾಡಲು ಸೂಚಿಸಲಾಗಿದೆಡಿಜಿಸಿಎ
ವಿಮಾನಗಳ ಹಾರಾಟವು ಸಾಮಾನ್ಯ ಸ್ಥಿತಿಗೆ ಮರಳಿದೆ. ಸಮಸ್ಯೆಗೆ ಒಳಗಾದ ಗ್ರಾಹಕರ ಅಗತ್ಯವನ್ನೂ ಪೂರೈಸಲಾಗುತ್ತಿದೆಪೀಟರ್ ಎಲ್ಬರ್ಸ್, ಇಂಡಿಗೊ ಸಂಸ್ಥೆಯ ಸಿಇಒ (ವಿಡಿಯೊ ಸಂದೇಶದಲ್ಲಿ ಹೇಳಿದ್ದು)
ಡಿಜಿಸಿಎ ಹೇಳಿದ್ದೇನು?
2025–26ರ ಚಳಿಗಾಲದ ಅವಧಿಯಲ್ಲಿ ಪ್ರತಿ ವಾರ 15,014 ವಿಮಾನಗಳ ಹಾರಾಟದಂತೆಯೇ ನವೆಂಬರ್‌ನಲ್ಲಿ ಒಟ್ಟು 64,346 ವಿಮಾನಗಳ ಹಾರಾಟಕ್ಕೆ ಇಂಡಿಗೊ ಸಂಸ್ಥೆಗೆ ಡಿಜಿಸಿಎ ಅನುಮತಿ ನೀಡಿತ್ತು. ಆದರೆ, ನವೆಂಬರ್‌ನಲ್ಲಿಯೇ ಸುಮಾರು 951 ವಿಮಾನಗಳ ಹಾರಾಟವನ್ನು ಇಂಡಿಗೊ ರದ್ದು ಮಾಡಿತು.
ಇಂಡಿಗೊ ಸಂಸ್ಥೆಯು ಬಿಕ್ಕಟ್ಟಿನಲ್ಲಿ ಇರುವ ಕಾರಣ, ಇದಕ್ಕೆ ನೀಡಿದ್ದ ಅನುಮತಿಯನ್ನು ಡಿಜಿಸಿಎ ಪರಿಶೀಲಿಸಿತು. ಅನುಮತಿ ನೀಡಿದಷ್ಟು ವಿಮಾನ ಹಾರಾಟ ನಡೆಸುವ ಸಾಮರ್ಥ್ಯವನ್ನು ಇಂಡಿಗೊ ನಿರೂಪಿಸಿಲ್ಲ. ಆದ್ದರಿಂದ, ಶೇ 5ರಷ್ಟು ವಿಮಾನಗಳ ಹಾರಾಟವನ್ನು ಕಡಿತ ಮಾಡಲು ತಿಳಿಸಲಾಗಿದೆ’ ಎಂದು ಡಿಜಿಸಿಎ ಹೇಳಿತ್ತು.
‘500 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದ್ದು, ಬುಧವಾರ ಸುಮಾರು 1,900 ವಿಮಾನಗಳ ಹಾರಾಟ ನಡೆಸಲು ಯೋಜಿಸಲಾಗಿದೆ’ ಇಂಡಿಗೊ ಹೇಳಿದೆ. 2024ರ ಚಳಿಗಾಲದ ಅವಧಿಗೆ ಹೋಲಿಸಿಕೊಂಡರೆ, 2025ರ ಚಳಿಗಾಲದ ಅವಧಿಯಲ್ಲಿ ಶೇ 9.66ರಷ್ಟು ಹೆಚ್ಚಿನ ವಿಮಾನಗಳ ಹಾರಾಟ ನಡೆಸಲು ಇಂಡಿಗೊ ಯೋಜಿಸಿತ್ತು. 2025–26ರ ಚಳಿಗಾಲದ ವೇಳಾಪಟ್ಟಿಯ ಪ್ರಕಾರ, ಇಂಡಿಗೊ ಸಂಸ್ಥೆಯು ದಿನಕ್ಕೆ 2,200 ವಿಮಾನಗಳ ಹಾರಾಟ ನಡೆಸುತ್ತಿದೆ.
‘ಇಂಡಿಗೊ ವಿರುದ್ಧ ಕಠಿಣ ಕ್ರಮ’
ಎಷ್ಟೇ ದೊಡ್ಡ ವಿಮಾನಯಾನ ಸಂಸ್ಥೆಯಾಗಿರಲಿ. ತಮ್ಮ ಸೂಕ್ತ ಯೋಜನೆ ಇಲ್ಲದೆ, ನಿಯಮಗಳನ್ನು ಸರಿಯಾಗಿ ಪಾಲಿಸದೆ ಪ್ರಯಾಣಿಕರು ಸಂಕಷ್ಟ ಎದುರಿಸುವಂತೆ ಮಾಡಲು ಅವಕಾಶವಿಲ್ಲ. ಪ್ರಯಾಣಿಕರಿಗೆ ತೊಂದರೆ ನೀಡಿದ ಇಂಡಿಗೊ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
ಸದೃಢ ವಿಮಾನಯಾನ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ನಮ್ಮ ನೀತಿಗಳ ಮೂಲಕ ಹೊಸ ಹೊಸ ವಿಮಾನಯಾನ ಸಂಸ್ಥೆಗಳು ಹುಟ್ಟಿಕೊಳ್ಳಲು ಉತ್ತೇಜಿಸುತ್ತಿದ್ದೇವೆ. ಸುರಕ್ಷತೆಯು ವಿಚಾರದಲ್ಲಿ ವಿನಾಯಿತಿಯೇ ಇಲ್ಲ
– ಕೆ. ರಾಮಮೋಹನ್ ನಾಯ್ಡು, ಕೇಂದ್ರ ವಿಮಾನಯಾನ ಸಚಿವ (ಲೋಕಸಭೆಯಲ್ಲಿ ನೀಡಿದ ಹೇಳಿಕೆ)
121 ವಿಮಾನ ಹಾರಾಟ ರದ್ದು (ದೇವನಹಳ್ಳಿ ವರದಿ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೊ ಸಂಸ್ಥೆಯ ಒಟ್ಟು 121 ವಿಮಾನಗಳ ಹಾರಾಟವು ಮಂಗಳವಾರ ರದ್ದಾಗಿದೆ.
ಬೆಂಗಳೂರಿಗೆ ಬರಬೇಕಿದ್ದ 58 ಮತ್ತು ಇಲ್ಲಿಂದ ಹೊರಡಬೇಕಿದ್ದ 63 ವಿಮಾನಗಳ ಕಾರ್ಯಾಚರಣೆ ರದ್ದು ಮಾಡಲಾಗಿದೆ.ಸಹಾಯ ಕೇಂದ್ರ ಬಳಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.