ADVERTISEMENT

ತಮಿಳುನಾಡು: ಗೃಹ ಖಾತೆ ಉಳಿಸಿಕೊಂಡ ಸ್ಟಾಲಿನ್‌, 34 ಸಚಿವರ ಪಟ್ಟಿ ಬಿಡುಗಡೆ

ಏಜೆನ್ಸೀಸ್
Published 6 ಮೇ 2021, 14:41 IST
Last Updated 6 ಮೇ 2021, 14:41 IST
ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌
ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌   

ನವದೆಹಲಿ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಸರ್ಕಾರ ರಚನೆಗೆ ಮುಂದಾಗಿರುವ ಎಂ.ಕೆ.ಸ್ಟಾಲಿನ್‌ ನೇತೃತ್ವದ ಡಿಎಂಕೆ ಪಕ್ಷವು ಗುರುವಾರ 34 ಸಚಿವರ ಪಟ್ಟಿ ಬಿಡುಗಡೆ ಮಾಡಿದೆ.

ತಮಿಳುನಾಡು ಮುಖ್ಯಮಂತ್ರಿಯಾಗಿ ಸ್ಟಾಲಿನ್‌ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗೃಹ ಖಾತೆ, ಸಾರ್ವಜನಿಕ ಆಡಳಿತ ಸೇರಿದಂತೆ ಪ್ರಮುಖ ಖಾತೆಗಳನ್ನು ಸ್ಟಾಲಿನ್‌ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

ಮೊದಲ ಬಾರಿ ಶಾಸಕರಾಗಿರುವ ಸ್ಟಾಲಿನ್‌ ಅವರ ಪುತ್ರ ಉದಯನಿಧಿ ಹೆಸರು ಪಕ್ಷ ಬಿಡುಗಡೆ ಮಾಡಿರುವ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಬಿಡುಗಡೆಯಾಗಿರುವ ಪಟ್ಟಿಯ ಪ್ರಕಾರ, ಮಾ ಸುಬ್ರಮಣಿಯನ್‌ ಅವರು ನೂತನ ಆರೋಗ್ಯ ಸಚಿವರಾಗಲಿದ್ದಾರೆ. ದೊರೈಮುರುಗನ್‌ ಜನ ಸಂಪನ್ಮೂಲ ಖಾತೆ, ಕೆ.ಎನ್‌.ನೆಹರು ಅವರು ಮುನಿಸಿಪಲ್‌ ಆಡಳಿತ ಖಾತೆಗಳನ್ನು ಪಡೆಯಲಿದ್ದಾರೆ. ಪಳನಿವೇಲ್‌ ಥಿಯಗರಾಜನ್‌ ಅವರಿಗೆ ಹಣಕಾಸು ಇಲಾಖೆ, ಕೆ.ಪೊನ್ಮುಡಿ ಅವರಿಗೆ ಉನ್ನತ ಶಿಕ್ಷಣ, ಗೀತಾ ಜೀವನ್‌, ಪಿ.ಕೆ.ಶೇಕರ್‌ ಬಾಬು, ಅನ್ಬಿಲ್‌ ಮಹೇಶ್‌ ಪೊಯ್ಯಮೊಳಿ ಸೇರಿದಂತೆ ಒಟ್ಟು 34 ಸಚಿವರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.

ADVERTISEMENT

ತಮಿಳುನಾಡಿನ 234 ವಿಧಾನಸಭೆ ಕ್ಷೇತ್ರಗಳ ಪೈಕಿ 159 ಕ್ಷೇತ್ರಗಳಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟವು ಗೆಲುವು ಸಾಧಿಸಿದೆ. ಬಹುಮತಕ್ಕಾಗಿ ಯಾವುದೇ ಪಕ್ಷ ಕನಿಷ್ಠ 118 ಸ್ಥಾನಗಳನ್ನು ಪಡೆದಿರಬೇಕು. ಬುಧವಾರ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌ ಅವರನ್ನು ಭೇಟಿಯಾದ ಸ್ಟಾಲಿನ್‌, ಸರ್ಕಾರ ರಚನೆಯ ಹಕ್ಕು ಮಂಡಿಸಿದರು. ಶುಕ್ರವಾರ ಬೆಳಿಗ್ಗೆ 9ಗಂಟೆಗೆ ರಾಜ ಭವನದಲ್ಲಿ ಸರಳ ಕಾರ್ಯಕ್ರಮದಲ್ಲಿ ಸ್ಟಾಲಿನ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.