ನವದೆಹಲಿ: ಪೂರ್ವ ಲಡಾಖ್ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿ ಭಾರತ–ಚೀನಾ ರಾಜತಾಂತ್ರಿಕ ಮಟ್ಟದ ಮತ್ತೊಂದು ಸುತ್ತಿನ ಮಾತುಕತೆ ಈ ವಾರ ನಡೆಯುವ ಸಾಧ್ಯತೆ ಇದೆ. ಬಾಕಿ ಉಳಿದಿರುವ ಪ್ರದೇಶಗಳಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ–ಚೀನಾ ಗಡಿ ವ್ಯವಹಾರಗಳ ಸಮನ್ವಯಕ್ಕಾಗಿ ನಡೆಯುವ ಮಾತುಕತೆಯು ಉಭಯ ದೇಶಗಳ ಸೇನಾ ಪಡೆಗಳ ನಡುವೆ ಪೂರ್ವ ಲಡಾಖ್‌ನಲ್ಲಿ ಇರುವ ಉದ್ವಿಗ್ನತೆ ಕಡಿಮೆಗೊಳಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ಜೂನ್ 24ರಂದು ಮಾತುಕತೆ ನಡೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಕಳೆದ ಸುತ್ತಿನ ಮಾತುಕತೆಯು ಮಾರ್ಚ್ 12ರಂದು ನಡೆದಿತ್ತು.
ರಾಜತಾಂತ್ರಿಕ ಮಟ್ಟದ ಮಾತುಕತೆಯ ಬಳಿಕ ಮತ್ತೊಂದು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ ಎಂಬುದೂ ತಿಳಿದುಬಂದಿದೆ.
ಕಳೆದ ವರ್ಷ ಪೂರ್ವ ಲಡಾಖ್ ಗಡಿ ಪ್ರದೇಶದ ಹಲವೆಡೆ ಭಾರತ–ಚೀನಾ ಸೇನಾ ಪಡೆಗಳ ನಡುವೆ ಮುಖಾಮುಖಿ ಏರ್ಪಟ್ಟಿತ್ತು. ಹಲವು ಸುತ್ತಿನ ಮಾತುಕತೆಗಳ ಬಳಿಕ ಎರಡೂ ದೇಶಗಳು ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಬಳಿಯಿಂದ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.
ಇದೀಗ ಗೊಗ್ರಾ ಮತ್ತು ದೆಪ್ಸಾಂಗ್ ಪ್ರದೇಶಗಳಿಂದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಮಾತುಕತೆ ಪ್ರಕ್ರಿಯೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.