
ಪ್ರತೀಕ್ ಜೈನ್ ನಿವಾಸದಿಂದ ಕಡತದೊಂದಿಗೆ ಹೊರಬಂದ ಮಮತಾ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು
–ಪಿಟಿಐ ಚಿತ್ರ
ನವದೆಹಲಿ/ ಕೋಲ್ಕತ್ತ: ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್’ನ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಢೀರ್ ಧಾವಿಸಿ ಬಂದಿದ್ದಾರೆ.
ಈ ನಾಟಕೀಯ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ. ಜೈನ್ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಐ.ಟಿ ಸೆಲ್‌ನ ಮುಖ್ಯಸ್ಥರೂ ಹೌದು.
ಇ.ಡಿ ಕ್ರಮವನ್ನು ‘ರಾಜಕೀಯ ಪ್ರೇರಿತ’ ಮತ್ತು ‘ಅಸಾಂವಿಧಾನಿಕ’ ಎಂದು ಟೀಕಿಸಿದ ಮಮತಾ, ‘ಟಿಎಂಸಿಯ ರಹಸ್ಯ ದಾಖಲೆಗಳನ್ನು ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದ್ದಾರೆ.
ಕಡತ ಹೊರತಂದ ಮಮತಾ: ಇ.ಡಿ ಅಧಿಕಾರಿಗಳು ಬೆಳಿಗ್ಗೆ 7ರಿಂದಲೇ ಶೋಧ ಆರಂಭಿಸಿದ್ದಾರೆ. ಮಮತಾ ಅವರು ಮಧ್ಯಾಹ್ನದ ವೇಳೆ ಪ್ರತೀಕ್ ನಿವಾಸಕ್ಕೆ ಬಂದಿದ್ದಾರೆ. ಕೋಲ್ಕತ್ತ ಪೊಲೀಸ್ ಆಯುಕ್ತ ಮನೋಜ್ ವರ್ಮಾ ಸ್ಥಳಕ್ಕೆ ತಲುಪಿದ ಕೆಲವೇ ನಿಮಿಷಗಳಲ್ಲಿ ಮಮತಾ ಆಗಮಿಸಿದ್ದಾರೆ. ಜೈನ್ ಮನೆಯಲ್ಲಿ 20–25 ನಿಮಿಷ ಇದ್ದ ಅವರು ನಿವಾಸದಿಂದ ಹೊರಬರುವಾಗ ಹಸಿರು ಬಣ್ಣದ ಕಡತ ಹಿಡಿದುಕೊಂಡಿದ್ದರು.
‘ಇ.ಡಿ ಅಧಿಕಾರಿಗಳು ನಮ್ಮ ಐ.ಟಿ ಸೆಲ್ ಉಸ್ತುವಾರಿಯ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ, ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ನಾನು ಅವುಗಳನ್ನು ಮರಳಿ ತಂದಿದ್ದೇನೆ’ ಎಂದು ಮಮತಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಚೇರಿಗೂ ಬಂದ ಮಮತಾ: ಇ.ಡಿ ಅಧಿಕಾರಿಗಳು ‘ಐ–ಪ್ಯಾಕ್’ ಕಚೇರಿಯಲ್ಲಿ ಶೋಧ ನಡೆಸುತ್ತಿದ್ದಾಗ ಮಮತಾ ಮಧ್ಯಾಹ್ನ 1ರ ಸುಮಾರಿಗೆ ಅಲ್ಲಿಗೂ ಬಂದಿದ್ದಾರೆ.
ವಿಐಪಿಗಳಿಗೆ ಪ್ರತ್ಯೇಕ ಲಿಫ್ಟ್ ಇದ್ದರೂ, ಅವರು ಸಾಮಾನ್ಯ ಲಿಫ್ಟ್ ಬಳಸಿ ‘ಐ–ಪ್ಯಾಕ್’ ಕಚೇರಿಯಿರುವ 11ನೇ ಮಹಡಿಗೆ ಬಂದಿದ್ದಾರೆ. ದಾಳಿಯ ಸಂದರ್ಭದಲ್ಲಿ ಕೇಂದ್ರೀಯ ಭದ್ರತಾ ಪಡೆಯ ಸಿಬ್ಬಂದಿ ಕಟ್ಟಡದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಮುಚ್ಚಿದ್ದರು. ಮಮತಾ ಅವರು ಬೇಸ್‌ಮೆಂಟ್‌ಗೆ ಬಂದು ಅಲ್ಲಿಂದ ಲಿಫ್ಟ್ ಮೂಲಕ ಕಚೇರಿ ತಲುಪಿದ್ದಾರೆ.
ಪ್ರತೀಕ್ ಜೈನ್ ಬರುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಮಮತಾ ಹೇಳಿದರು. ಪ್ರತೀಕ್ ಅವರು ಕಚೇರಿಗೆ ಬಂದ ಬಳಿಕ ಸಂಜೆ 4.14ರ ಸುಮಾರಿಗೆ ಅವರು ಅಲ್ಲಿಂದ ತೆರಳಿದರು.
‘ಕಚೇರಿಯೊಳಗೆ ಯಾರೂ ಇಲ್ಲದಿದ್ದಾಗ ಶೋಧ ಆರಂಭಿಸಿದ್ದಾರೆ. ಅವರು ನಮ್ಮ ದತ್ತಾಂಶ, ಚುನಾವಣೆಯ ಕಾರ್ಯತಂತ್ರಗಳು ಮತ್ತು ಮಾಹಿತಿಯನ್ನು ಅವರ ಲ್ಯಾಪ್‌ಟಾಪ್‌ಗೆ ವರ್ಗಾಯಿಸಿದರು. ಇದು ಅಪರಾಧ’ ಎಂದು ಮಮತಾ ದೂರಿದರು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇ.ಡಿ ಮತ್ತು ‘ಐ–ಪ್ಯಾಕ್’ ಗುರುವಾರ ಕಲ್ಕತ್ತಾ ಹೈಕೋರ್ಟ್ ಮೊರೆಹೋಗಿವೆ. ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲಾಗಿದೆ ಎಂದು ಆರೋಪಿಸಿ ಇ.ಡಿ ನ್ಯಾಯಾಲಯದ ಮೆಟ್ಟಿಲೇರಿದರೆ ‘ಐ-ಪ್ಯಾಕ್’ ಇ.ಡಿ ಶೋಧದ ಕಾನೂನುಬದ್ಧತೆಯನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ಸುವ್ರಾ ಘೋಷ್ ಅವರು ಎರಡೂ ಕಡೆಯವರು ಸಲ್ಲಿಸಿರುವ ಅರ್ಜಿಗಳನ್ನು ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಮಮತಾ ಬ್ಯಾನರ್ಜಿ ನಡೆ ಸಂವಿಧಾನಬಾಹಿರ. ಇ.ಡಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.-ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.