
ಪಿಟಿಐ ಚಿತ್ರ
ಕೋಲ್ಕತ್ತ: ರಾಜಕೀಯ ಸಲಹಾ ಸಂಸ್ಥೆ ‘ಐ-ಪ್ಯಾಕ್’ನ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸ ಮತ್ತು ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಯನ್ನು ವಿರೋಧಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆದಿದೆ.
ಈ ವೇಳೆ ಪ್ರತಿಕ್ರಿಯಿಸಿರುವ ಈ ದಾಳಿ ಯಾವುದೇ ಹಣಕಾಸಿಗೆ ಸಂಬಂಧಿಸಿದ ದಾಳಿಯಲ್ಲ. ಬದಲಾಗಿ ‘ಇ.ಡಿ ಅಧಿಕಾರಿಗಳು ನಮ್ಮ ಐ.ಟಿ ಸೆಲ್ ಉಸ್ತುವಾರಿಯ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ, ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ನಾನು ಅವುಗಳನ್ನು ಮರಳಿ ತಂದಿದ್ದೇನೆ’ ಎಂದು ಮಮತಾ ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ಟಿಎಂಸಿ ಪಕ್ಷದ ಹಿರಿಯ ನಾಯಕರು, ಸಚಿವರು, ಸಂಸದರು, ಶಾಸಕರು ಮತ್ತು ಸೇರಿದಂತೆ ಭಾರಿ ಬೆಂಬಲಿಗರೊಂದಿಗೆ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದಾರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿವೆ. 2026ರ ವಿಧಾನಸಭಾ ಚುನಾವಣೆಗೆ ಮುನ್ನ 'ರಾಜಕೀಯ ಸೇಡಿಗಾಗಿ ಕೇಂದ್ರ ಸರ್ಕಾರ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ' ಎಂದು ಮಮತಾ ಆರೋಪಿಸಿದ್ದಾರೆ.
‘ಐ-ಪ್ಯಾಕ್’ನ ಕಚೇರಿ ನಿರ್ದೇಶಕ ಮತ್ತು ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಐ.ಟಿ ಸೆಲ್‌ನ ಮುಖ್ಯಸ್ಥರೂ ಆಗಿರುವ ಪ್ರತೀಕ್ ಜೈನ್ ನಿವಾಸದ ಮೇಲೆ ನಡೆದಿದೆ. ಇ.ಡಿ ದಾಳಿಯು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸದ್ದು ಮಾಡಿದೆ.