ADVERTISEMENT

ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

ಪಿಟಿಐ
Published 21 ಡಿಸೆಂಬರ್ 2025, 13:33 IST
Last Updated 21 ಡಿಸೆಂಬರ್ 2025, 13:33 IST
<div class="paragraphs"><p>ರೈಲು ಅಪಘಾತದ ದೃಶ್ಯ</p></div>

ರೈಲು ಅಪಘಾತದ ದೃಶ್ಯ

   

ಗುವಾಹಟಿ: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಸಾಯಿರಂಗ್‌–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆನೆ ಮೃತಪಟ್ಟಿದೆ. ಇದರೊಂದಿಗೆ ಸಾವಿಗೀಡಾದ ಆನೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.

‘ರೈಲು ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ಆನೆ ‘ಕರು’ ಕಾಜಿರಂಗದಲ್ಲಿರುವ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ (ಸಿಡಬ್ಲ್ಯೂಆರ್‌ಸಿ) ಚಿಕಿತ್ಸೆ ಪಡೆಯುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದೆ’ ಎಂದು ನಗಾಂವ್ ವಿಭಾಗದ ಅರಣ್ಯಾಧಿಕಾರಿ ಶಮೀಮ್ ಅಖ್ತರ್ ತಿಳಿಸಿದ್ದಾರೆ.

ADVERTISEMENT

ಶನಿವಾರ ತಡರಾತ್ರಿ 2.17ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ದಟ್ಟ ಮಂಜು ಆವರಿಸಿದ್ದರಿಂದ ಲೊಕೊ ಪೈಲಟ್‌ಗೆ ದೂರದಿಂದ ಆನೆ ಹಿಂಡು ಕಾಣಿಸಲಿಲ್ಲ. ರೈಲಿಗೆ ತೀರಾ ಸಮೀಪದಲ್ಲಿ ಆನೆಗಳನ್ನು ನೋಡಿದ ಲೊಕೊ ಪೈಲಟ್‌ ತಕ್ಷಣವೇ ಬ್ರೇಕ್‌ ಹಾಕಿದರೂ ಅಷ್ಟರಲ್ಲಾಗಲೇ ಅವಘಡ ಸಂಭವಿಸಿತ್ತು. ಹಿಂಡಿನಲ್ಲಿದ್ದ ಒಂದು ಆನೆ ಗಂಭೀರ ಗಾಯಗಳೊಂದಿಗೆ ಬದುಕುಳಿದಿತ್ತು.

ಘಟನೆಯಲ್ಲಿ ರೈಲಿನ ಎಂಜಿನ್‌ ಒಳಗೊಂಡು ಐದು ಬೋಗಿಗಳು ಹಳಿ ತಪ್ಪಿದ್ದವು. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹಾಗೂ ವನ್ಯಜೀವಿ ಕಾರಿಡಾರ್‌ಗಳಲ್ಲಿ ಸುರಕ್ಷತೆಗೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.