ಅರವಿಂದ ಕೇಜ್ರಿವಾಲ್, ನರೇಂದ್ರ ಮೋದಿ
(ಪಿಟಿಐ ಚಿತ್ರಗಳು)
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರ ಹಿಡಿಯುವ ಕನಸು ಕಮರಿದೆ.
ಮತ್ತೊಂದೆಡೆ 26 ವರ್ಷಗಳ ಸುದೀರ್ಘ ಅವಧಿಯ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಎಎಪಿ 22 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದರೆ, ಕಾಂಗ್ರೆಸ್‌ಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಇದರೊಂದಿಗೆ ದೆಹಲಿಯಲ್ಲೂ 'ಡಬಲ್ ಎಂಜಿನ್' ಸರ್ಕಾರಕ್ಕೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಚುನಾವಣೆಯಲ್ಲಿ ಎಎಪಿಯ ಘಟಾನುಘಟಿ ನಾಯಕರಾದ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರಧ್ವಾಜ್, ಸತ್ಯೇಂದ್ರ ಜೈನ್ ಸೋತು ನೆಲಕಚ್ಚಿದ್ದಾರೆ. ಅತ್ತ ಬಿಜೆಪಿಯ ಪರ್ವೇಜ್ ಸಾಹೀಬ್ ವರ್ಮ ಎಎಪಿ ಪಾಲಿಗೆ 'ಕಿಲ್ಲರ್' ಆಗಿ ಹೊರಹೊಮ್ಮಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ನಡೆದ ಹಲವಾರು ಅಂಶಗಳು ಎಎಪಿಗೆ ಮುಳುವಾಗಿ ಪರಿಣಮಿಸಿತು. ಮತ್ತೊಂದೆಡೆ ಸ್ಪಷ್ಟ ಯೋಜನೆಯೊಂದಿಗೆ ರಣತಂತ್ರ ರೂಪಿಸಿರುವ ಬಿಜೆಪಿ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಗಿದೆ.
ಭರ್ಜರಿ ಜಯ; ಬಿಜೆಪಿಗೆ ವರದಾನವಾಗಿದ್ದೇನು?
*ರಾಷ್ಟ್ರೀಯ ನಾಯಕರನ್ನು ಒಳಗೊಂಡಂತೆ ಯೋಜನಾಬದ್ಧವಾದ ಪ್ರಚಾರ, ರಣನೀತಿ
*ಎನ್‌ಡಿಎ ಮೈತ್ರಿಯೊಂದಿಗೆ ಪ್ರಾದೇಶಿಕವಾಗಿ ಬಿರುಸಿನ ಪ್ರಚಾರ ನಡೆಸುವಲ್ಲಿ ಯಶಸ್ವಿ
*'ಮೋದಿ ಗ್ಯಾರಂಟಿ' ಮುಂದೆ ಎಎಪಿ ಉಚಿತ ಆಫರ್‌ಗಳು ನೆಲಕಚ್ಚಿತು. ಮತದಾರರ ಒಲವು ಗೆದ್ದ ಬಿಜೆಪಿ.
*ಆರ್‌ಎಸ್‌ಎಸ್ ಸೇರಿದಂತೆ ಸಮಾನ ಮನಸ್ಕ ಸಂಸ್ಥೆಗಳಿಂದ ತೆರೆಮರೆಯಲ್ಲಿ ಪರಿಣಾಮಕಾರಿ ಕೆಲಸ.
*ಕೇಂದ್ರ ಬಜೆಟ್ ಎಫೆಕ್ಟ್: ಆದಾಯ ತೆರಿಗೆ ವಿನಾಯಿತಿಯೊಂದಿಗೆ ಮಧ್ಯಮ ವರ್ಗದ ಜನರನ್ನು ಓಲೈಸಲು ಯಶಸ್ವಿ.
*ದೆಹಲಿಯ ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳತ್ತ ಬಿಜೆಪಿ ಹೆಚ್ಚಿನ ಗಮನ ಕೇಂದ್ರಿಕರಿಸಿತ್ತು. ಕಳಪೆ ರಸ್ತೆ, ಅಸಮರ್ಪಕ ನೀರಿನ ಸರಬರಾಜು, ವಾಯು ಮಾಲಿನ್ಯ, ಕಾರ್ಯನಿರ್ವಹಿಸದ ಮೊಹಲ್ಲಾ ಚಿಕಿತ್ಸಾ ಕೇಂದ್ರ ಹೀಗೆ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಎತ್ತಿ ಹಿಡಿಯಿತು.
ಹೀನಾಯ ಸೋಲು; ಎಎಪಿಗೆ ಮುಳುವಾಗಿದ್ದೇನು?
*ನಿರಂತರವಾಗಿ ಭ್ರಷ್ಟಾಚಾರ ಆರೋಪ, ದೆಹಲಿ ಅಬಕಾರಿ ನೀತಿ ಹಗರಣ
*ಜೈಲು ಪಾಲಾದ ಅರವಿಂದ ಕೇಜ್ರಿವಾಲ್, ನಿಂತು ಹೋದ ಆಡಳಿತ ಚಕ್ರ
*ಕಳೆಗುಂದಿದ 'ಕೇಜ್ರಿವಾಲ್ ಬ್ರ್ಯಾಂಡ್'. ಅಬಕಾರಿ ನೀತಿ ಹಗರಣದಲ್ಲಿ ಎಎಪಿಯ ಹಲವು ನಾಯಕರು ಜೈಲು ಪಾಲಾದರು.
*ಎಎಪಿ ನಾಯಕರ ವಿರುದ್ಧ ವಿಲಾಸಿ ಜೀವನದ ಆರೋಪ. ದೆಹಲಿ ಸಿಎಂ ಅಧಿಕೃತ ಬಂಗಲೆಯ ನವೀಕರಣದಲ್ಲೂ ಭಾರಿ ಅವ್ಯವಹಾರ ಆರೋಪ.
*ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲ.
*ಆಡಳಿತ ವಿಚಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರ್ಕಾರದ ಜೊತೆ ನಿರಂತರ ತಿಕ್ಕಾಟ.
*ನಾಗರಿಕ ಮೂಲಸೌಕರ್ಯ ವೃದ್ಧಿಯಲ್ಲಿ ವಿಫಲ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲೂ ನಿರೀಕ್ಷೆ ಮುಟ್ಟಲಿಲ್ಲ.
*'ಇಂಡಿಯಾ' ಮೈತ್ರಿಕೂಟದಲ್ಲಿ ಬಿರುಕು: ಕನಿಷ್ಠ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಉತ್ತಮ ಸಾಧನೆ ಎಎಪಿ ಅಭ್ಯರ್ಥಿಗಳ ಸೋಲಿಗೆ ಹೇತುವಾಯಿತು. ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್-ಎಎಪಿ, ಈ ಬಾರಿ ಪರಸ್ಪರ ಮುನಿಸಿಕೊಂಡು ಚುನಾವಣೆ ಎದುರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.