ರೈತರ ಪ್ರತಿಭಟನೆ
(ಪಿಟಿಐ ಚಿತ್ರ)
ಚಂಡೀಗಢ: ಪಂಜಾಬ್ ಮತ್ತು ಹರಿಯಾಣದ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಗುಂಪು ಇಂದು (ಶುಕ್ರವಾರ) ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ರೈತರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
101 ರೈತರನ್ನು ಒಳಗೊಂಡ ಗುಂಪು ಪಾದಯಾತ್ರೆ ನಡೆಸಲಿದೆ. ರೈತರ ಪಾದಯಾತ್ರೆ ಹಿನ್ನೆಲೆಯಲ್ಲಿ ಹರಿಯಾಣ ಗಡಿ ಭಾಗದಲ್ಲಿ ಭಾರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಂಬಾಲಾ ಜಿಲ್ಲಾಡಳಿತವು, ಪ್ರದೇಶದಲ್ಲಿ ಸೆಕ್ಷನ್ 163 ಜಾರಿಗೊಳಿಸಿದೆ. ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಸೇರುವುದನ್ನು ನಿರ್ಬಂಧಿಸಲಾಗಿದೆ.
ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ ನೀಡಿದೆ.
ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ಜಲಫಿರಂಗಿಗಳನ್ನು ಏರ್ಪಡಿಸಲಾಗಿದೆ. ಭದ್ರತೆಗಾಗಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.
ಪಂಜಾಬ್ ಮತ್ತು ಹರಿಯಾಣದಿಂದ ಹೆಚ್ಚಿನ ಸಂಖ್ಯೆಯ ರೈತರು ದೆಹಲಿಗೆ ತೆರಳಲು ಶಂಭು ಗಡಿಯಲ್ಲಿ ಸೇರುವ ಸಾಧ್ಯತೆಯಿದೆ.
'ಪಾದಯಾತ್ರೆ ಶಾಂತಿಯುತವಾಗಿ ನಡೆಯಲಿದೆ. ಆದರೆ ಹರಿಯಾಣ ಆಡಳಿತವು ತಡೆಯೊಡ್ಡಲು ಪ್ರಯತ್ನಿಸುತ್ತಿದೆ' ಎಂದು ರೈತ ಮಖಂಡ ಸರ್ವಾನ್ ಸಿಂಗ್ ಹೇಳಿದ್ದಾರೆ.
ಎಂಎಸ್‌ಪಿ, ಕೃಷಿ ಸಾಲ ಮನ್ನಾ, ರೈತರಿಗೆ ಪಿಂಚಣಿ, ಪೊಲೀಸ್ ಪ್ರಕರಣಗಳ ರದ್ದು, ವಿದ್ಯುತ್ ದರ ಏರಿಕೆ ಮಾಡಬಾರದು, 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.