ಅರವಿಂದ ಕೇಜ್ರಿವಾಲ್
– ಪಿಟಿಐ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಬಾಡಿಗೆದಾರರಿಗೂ ಉಚಿತ ವಿದ್ಯುತ್, ನೀರಿನ ಯೋಜನೆಗಳನ್ನು ವಿಸ್ತರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಎಲ್ಲಿಗೆ ಹೋದರೂ, ಬಾಡಿಗೆದಾರರನ್ನು ಭೇಟಿಯಾಗುತ್ತೇನೆ. ಅವರು ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ಉಚಿತ ವಿದ್ಯುತ್ ಮತ್ತು ನೀರಿನ ಯೋಜನೆಗಳಿಂದ ವಂಚಿತರಾಗಿದ್ದಾರೆ’ ಎಂದು ಅವರು ಹೇಳಿದರು.
‘ಚುನಾವಣೆ ನಂತರ ಪೂರ್ವಾಂಚಲ ಪ್ರದೇಶಕ್ಕೆ ಸೇರಿದ ಅನೇಕ ಬಾಡಿಗೆದಾರರೂ ಉಚಿತ ವಿದ್ಯುತ್ ಮತ್ತು ನೀರಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂಬುದನ್ನು ನಾವು ಖಾತ್ರಿಪಡಿಸುತ್ತೇವೆ’ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಈಗಾಗಲೇ ಈ ಸೌಲಭ್ಯವಿದೆ ಎಂದು ಎಎಪಿ ಶುಕ್ರವಾರ ಹೇಳಿತ್ತು.
ಎಲ್ಲ ವಿದ್ಯಾರ್ಥಿಗಳಿಗೆ ಮೆಟ್ರೊ ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲು ಅನುಮತಿ ನೀಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿಯೂ ಎಎಪಿ ಹೇಳಿತ್ತು.
‘ಮೆಟ್ರೊ ಪ್ರಯಾಣ ದರ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಆದ್ದರಿಂದ ಪ್ರಧಾನಿಗೆ ಮನವಿ ಮಾಡಿದ್ದೇನೆ. ಈ ಯೋಜನೆಗೆ ಬೇಕಾದ ಅರ್ಧದಷ್ಟು ಹಣವನ್ನು ಭರಿಸಲು ಸಿದ್ಧರಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದ್ದರು.
ದೆಹಲಿ ವಿಧಾನಸಭೆಗೆ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರುವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ದೆಹಲಿ ಚುನಾವಣೆಯಲ್ಲಿ ಈ ಬಾರಿ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.