ADVERTISEMENT

'ಜಿ ರಾಮ್‌ ಜಿ' ಮಸೂದೆ ಮಂಡಿಸಿದ ಕೇಂದ್ರ ಸರ್ಕಾರ: ವಿರೋಧ ಪಕ್ಷಗಳಿಂದ ಆಕ್ಷೇಪ

​ಪ್ರಜಾವಾಣಿ ವಾರ್ತೆ
ಪಿಟಿಐ
Published 16 ಡಿಸೆಂಬರ್ 2025, 14:10 IST
Last Updated 16 ಡಿಸೆಂಬರ್ 2025, 14:10 IST
‘ಜಿ ರಾಮ್‌ ಜಿ’ ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ
‘ಜಿ ರಾಮ್‌ ಜಿ’ ಮಸೂದೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನ ಆವರಣದಲ್ಲಿ ಇರುವ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರಿನಲ್ಲಿ ಮಹಾತ್ಮ ಗಾಂಧಿ ಹೆಸರು ಕೈಬಿಟ್ಟಿರುವುದು, ರಾಜ್ಯಗಳ ಮೇಲೆ ಶೇ 40ರಷ್ಟು ಹೊರ ಹೊರಿಸಿರುವುದು ಸೇರಿ ಇತರೆ ವಿಚಾರಗಳಿಗೆ ಸಂಬಂಧಿಸಿ ವಿರೋಧ ಪಕ್ಷಗಳ ತೀವ್ರ ಆಕ್ಷೇಪದ ಮಧ್ಯೆಯೇ ಕೇಂದ್ರ ಸರ್ಕಾರವು ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಮಸೂದೆ, 2025’ ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿತು.

ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಸೂದೆಯನ್ನು ಮಂಡಿಸಿದರು. ನರೇಗಾ ಕಾಯ್ದೆಯ ಹೆಸರನ್ನು ಬದಲಿಸಿ ‘ಪೂಜ್ಯ ಬಾಪು ಗ್ರಾಮೀಣ ರೋಜಗಾರ್‌ ಯೋಜನೆ’ ಎಂಬ ಹೆಸರಿಡಲು ಈ ಮೊದಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ, ಅಂತಿಮವಾಗಿ ಕೇಂದ್ರವು ನರೇಗಾ ಕಾಯ್ದೆಯನ್ನೇ ಹಿಂಪಡೆಯಲು ಹೊಸ ಮಸೂದೆ ಮಂಡಿಸಿದೆ.

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಸೂದೆ ಮಂಡಿಸುತ್ತಿದ್ದಂತೆಯೇ, ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಡಿಎಂಕೆ ಪಕ್ಷದ ಟಿ.ಆರ್‌. ಬಾಲು, ಆರ್‌ಎಸ್‌ಪಿ ಪಕ್ಷದ ಎನ್‌.ಜೆ. ಪ್ರೇಮಚಂದ್ರನ್‌ ಸೇರಿದಂತೆ ವಿರೋಧ ಪಕ್ಷದ ಹಲವು ಸಂಸದರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ‘ಈ ಮಸೂದೆಯನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಿ’ ಎಂದು ಪಟ್ಟುಹಿಡಿದರು.

ADVERTISEMENT

‘ಗ್ರಾಮೀಣಾಭಿವೃದ್ಧಿಗಾಗಿ ಹಿಂದಿನ ಎಲ್ಲ ಸರ್ಕಾರಗಳಿಗಿಂತ ಮೋದಿ ಸರ್ಕಾರವು ಹೆಚ್ಚಿನ ಕೆಲಸ ಮಾಡಿದೆ. ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ದುರ್ಬಲಗೊಳಿಸಿಲ್ಲ. ಯಾಕೆಂದರೆ, 100 ಕೆಲಸದ ದಿನಗಳನ್ನು 125 ಕೆಲಸದ ದಿನಗಳಿಗೆ ಏರಿಸಿದ್ದೇವೆ’ ಎಂದು ಸಚಿವ ಚೌಹಾಣ್‌ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ: ಕೇಂದ್ರ ಸರ್ಕಾರವು ಹೊಸ ಮಸೂದೆಯನ್ನು ಮಂಡನೆ ಮಾಡುತ್ತಿದ್ದಂತೆಯೇ, ಕೈಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರವನ್ನು ಹಿಡಿದು ಸಂಸತ್ತಿನ ಮಕರ ದ್ವಾರದ ಬಳಿ ಸೇರಿದ ವಿರೋಧ ಪಕ್ಷಗಳ ಸಂಸದರು ಅಲ್ಲಿಂದ ಆವರಣದಲ್ಲಿರುವ ಗಾಂಧಿ ಪ್ರತಿಮೆವರೆಗೆ ನಡೆದು ಹೋಗಿ ಪ್ರತಿಭಟನೆ ನಡೆಸಿದರು. ‘ಮಹಾತ್ಮಾ ಗಾಂಧಿ ಅವರಿಗೆ ಮಾಡಿದ ಅವಮಾನವನ್ನು ದೇಶವು ಸಹಿಸುವುದಿಲ್ಲ’ ಎಂದು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ: ಹೊಸ ಮಸೂದೆಯನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷವು ಬುಧವಾರ ದೇಶದಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಬಗ್ಗೆ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಅವರು ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ‘ಹಕ್ಕು ಆಧರಿತ ಅಭಿವೃದ್ಧಿ ಯೋಜನೆಯನ್ನು ಅಂತ್ಯಗೊಳಿಸುವುದು, ಗಾಂಧೀಜಿ ಅವರ ಸಿದ್ಧಾಂತದ ಮೇಲೆ ದಾಳಿ ನಡೆಸುವ, ಕಾರ್ಮಿಕರ ಹಕ್ಕುಗಳು ಮತ್ತು ಒಕ್ಕೂಟ ವ್ಯವಸ್ಥೆಯ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದು ಬಿಜೆ‍ಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಗಾಂಧಿ ಕನಸು ನನಸು ಮಾಡುತ್ತಿದ್ದೇವೆ’

ಮಹಾತ್ಮ ಗಾಂಧಿಯು ನಮ್ಮ ಹೃದಯದಲ್ಲಿ ಇದ್ದಾರೆ. ನರೇಗಾವನ್ನು ಕಾಂಗ್ರೆಸ್‌ ಜಾರಿ ಮಾಡಿತು ಮತ್ತು ₹2.13 ಲಕ್ಷ ಕೋಟಿ ಖರ್ಚು ಮಾಡಿತು. ಆದರೆ ಬಡವರ ಅಭಿವೃದ್ಧಿಗಾಗಿ ಮೋದಿ ಸರ್ಕಾರವು ₹8 ಲಕ್ಷ ಕೋಟಿ ಖರ್ಚು ಮಾಡಿದೆ. ಜವಾಹರ್‌ ರೋಜ್‌ಗಾರ್‌ ಯೋಜನೆಯ ಹೆಸರನ್ನು ಕಾಂಗ್ರೆಸ್ ಬದಲಾಯಿಸಿತು. ಹಾಗಾದರೆ ಕಾಂಗ್ರೆಸ್‌ ನೆಹರೂ ಅವರನ್ನು ಅವಮಾನಿಸಿತೇ? ರಾಮ ದೇವರು ನಮ್ಮ ಪ್ರತಿ ಉಸಿರಿನಲ್ಲಿ ಇದ್ದಾರೆ. ‘ಜಿ ರಾಮ್‌ ಜಿ’ ಕುರಿತು ಅವರಿಗೇನು ತೊಂದರೆ? ಗಾಂಧಿ ಅವರು ರಾಮ ರಾಜ್ಯದ ಕನಸು ಕಂಡಿದ್ದರು ಮತ್ತು ಬಡವರ ಅಭಿವೃದ್ಧಿ ಮೂಲಕ ನಾವು ಈ ಕನಸನ್ನು ನನಸು ಮಾಡುತ್ತಿದ್ದೇವೆ

–ಶಿವರಾಜ್‌ ಸಿಂಗ್‌ ಚೌಹಾಣ್‌ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ

ಹೊಸ ಮಸೂದೆಯಲ್ಲಿ ಕೆಲಸದ ದಿನಗಳು ಹೆಚ್ಚಳವಾಗಿವೆ. ಆದರೆ ಕಾರ್ಮಿಕರ ದಿನಗೂಲಿ ಏನಾದರೂ ಏರಿಕೆಯಾಗಿದೆಯೇ? 
ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್‌ ಸಂಸದೆ

‘ರಾಮನ ಹೆಸರು ಹಾಳು ಮಾಡದಿರಿ’

‘ಕೊನೇ ಮನುಷ್ಯನಿಗೆ ಮೊದಲ ಆದ್ಯತೆ’ ಎನ್ನುವ ಗಾಂಧಿ ಅವರ ತತ್ವದ ಮೇಲೆಯೇ ನರೇಗಾವನ್ನು ಜಾರಿ ಮಾಡಲಾಗಿತ್ತು. ಇದೇ ನರೇಗಾಕ್ಕೆ ಮತ್ತು ಅದಕ್ಕೆ ‘ಗಾಂಧಿ’ ಹೆಸರು ನೀಡಿದ್ದಕ್ಕೆ ಇದ್ದ ಸಂಬಂಧವಾಗಿತ್ತು. ‘ಜಿ ರಾಮ್‌ ಜಿ’ ಎನ್ನುವ ಪದಸಮೂಹ ರೂಪುಗಳ್ಳಬೇಕು ಎನ್ನುವ ದೃಷ್ಟಿಯಿಂದಲೇ ಮಸೂದೆಗೆ ಎರಡು ಭಾಷೆಗಳಲ್ಲಿ ಹೆಸರಿಡಲಾಗಿದೆ. ಇದು ಸಂವಿಧಾನದ 348ನೇ ವಿಧಿಯ ಉಲ್ಲಂಘನೆ. ಜೊತೆಗೆ ಇದು ನನಗೆ ನನ್ನ ಬಾಲ್ಯದಲ್ಲಿ ಕೇಳಿದ ಬಾಲಿವುಡ್‌ನ ‘ದೇಖೋ ಓ ದಿವಾನೋ ಯೇ ಕಾಮ್‌ ನ ಕರೋ ರಾಮ್‌ ಕ ನಾಮ್‌ ಬದ್ನಾಮ್‌ ನ ಕರೋ’ (ಇಲ್ಲಿ ನೋಡಿರಿ ಮೂಢರೆ ರಾಮನ ಹೆಸರನ್ನು ಹಾಳುಗೆಡಹುವ ಕೆಲಸ ಮಾಡದಿರಿ) ಹಾಡನ್ನು ನೆನಪಿಸುತ್ತದೆ.

–ಶಶಿ ತರೂರ್‌ ಕಾಂಗ್ರೆಸ್‌ ಸಂಸದ

‘ಜನ ವಿರೋಧಿ ಮಸೂದೆ’

ಮೋದಿ ಅವರಿಗೆ ಎರಡು ವಿಚಾರಗಳು ಸ್ವಲ್ಪವೂ ಇಷ್ಟವಾಗುವುದಿಲ್ಲ– ಮಹಾತ್ಮ ಗಾಂಧಿ ಅವರ ಸಿದ್ಧಾಂತ ಮತ್ತು ಬಡವರ ಹಕ್ಕುಗಳು. ನರೇಗಾ ಯೋಜನೆಯು ಗಾಂಧಿ ಅವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಜೀವಂತ ಸಾಕ್ಷಿಯಂಬಂತಿತ್ತು. ಕೋವಿಡ್ ವೇಳೆ ಗ್ರಾಮೀಣ ಭಾಗದ ಕೋಟಿಗಟ್ಟಲೆ ಭಾರತೀಯರಿಗೆ ಆರ್ಥಿಕ ಸುರಕ್ಷೆಯಾಗಿತ್ತು. ಆದರೂ ಪ್ರಧಾನಿ ಮೋದಿ ಅವರಿಗೆ ಈ ಯೋಜನೆಯು ನಿದ್ದೆಗೆಡಿಸುತ್ತಿತ್ತು. ಕಳೆದ 10 ವರ್ಷಗಳಲ್ಲಿ ಕೇಂದ್ರವು ಈ ಯೋಜನೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಲೇ ಬಂದಿದೆ. ಈಗ ಇಡೀ ಯೋಜನೆಯನ್ನೇ ಅಂತ್ಯಗೊಳಿಸಿದ್ದಾರೆ. ರಸ್ತೆಯಿಂದ ಸದನದವರೆಗೆ ನಾವು ಈ ಜನ ವಿರೋಧಿ ಮಸೂದೆಯನ್ನು ವಿರೋಧಿಸುತ್ತೇವೆ

–ರಾಹುಲ್‌ ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.