ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಜಿ–20 ಶೃಂಗದ ಕಾರ್ಯತಂತ್ರ ರೂಪಿಸಲು ರಾಷ್ಟ್ರಪತಿ ಭವನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸೋಮವಾರ ನಡೆದ ಸರ್ವ ಪಕ್ಷಗಳ ಸಭೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯ್ತು.
ರಾಜಕೀಯ ವೈರಿಗಳೆಲ್ಲಾ ಒಂದೇ ವೇದಿಕೆಯಲ್ಲಿ ಜತೆಗೂಡಿದ್ದಲ್ಲದೇ, ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಸದಾ ರಾಜಕೀಯವಾಗಿ ‘ಕತ್ತಿ ಮಸೆಯುತ್ತಿದ್ದ‘ ನಾಯಕರೆಲ್ಲರೂ ಕುಶಾಲು ಮಾತನಾಡಿಕೊಂಡು ನಗು ವಿನಿಮಯ ಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್ ವರಿಷ್ಠ ದೇವೇಗೌಡ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಎಡಪಕ್ಷಗಳ ನಾಯಕರಾದ ಡಿ. ರಾಜಾ ಹಾಗೂ ಸೀತಾರಾಮ ಯೆಚೂರಿ ಸೇರಿದಂತೆ ಹಲವು ನಾಯಕರೊಂದಿಗೆ ತಮಾಷೆಯ ಕ್ಷಣಗಳನ್ನು ಕಳೆದರು.
ಈ ಸಭೆಯಲ್ಲಿ, ಜಿ–20 ಶೃಂಗಭೆಯ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ನಡೆಸಲಾಯ್ತು. ಈ ಅವಧಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.