
ಕಾಂಗ್ರೆಸ್ ಮತ್ತು ಬಿಜೆಪಿ
ನವದೆಹಲಿ: ‘ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಅರಿತಿರುವ ಬಿಜೆಪಿ, ಚುನಾವಣೆಗೂ ಮುನ್ನವೇ ಬಿಹಾರದ ಭಾಗಲ್ಪುರದ 1,050 ಎಕರೆ ಭೂಮಿಯನ್ನು ಅದಾನಿ ಸಮೂಹ ವಿದ್ಯುತ್ ಸ್ಥಾವರ ನಿರ್ಮಿಸಲು ಉಡುಗೊರೆಯಾಗಿ ನೀಡುತ್ತಿದೆ’ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
‘ಭಾಗಲ್ಪುರದ ಪಿರ್ಪೈಂತಿ ಗ್ರಾಮದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣಕ್ಕಾಗಿ 10 ಲಕ್ಷ ಮರಗಳು ಹಾಗೂ 1,050 ಎಕರೆ ಭೂಮಿಯನ್ನು ‘ರಾಷ್ಟ್ರ ಸೇಟ್’ ಗೌತಮ್ ಅದಾನಿಗೆ ವರ್ಷಕ್ಕೆ ₹1 ರಂತೆ 33 ವರ್ಷಗಳ ಅವಧಿಗೆ ನೀಡಲಾಗಿದೆ. ಮೋದಿ ಅವರು ಬಿಹಾರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಬಾರದು ಎಂಬ ಕಾರಣಕ್ಕೆ ಅವರನ್ನೆಲ್ಲಾ ಗೃಹಬಂಧನದಲ್ಲಿ ಇರಿಸಲಾಗಿದೆ’ ಎಂದೂ ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
‘₹21,400 ಕೋಟಿ ಮೊತ್ತದಲ್ಲಿ ಕೈಗೊಂಡಿರುವ 2,400 ಮೆಗಾವಾಟ್ ಯೋಜನೆ ಇದಾಗಿದ್ದು, ಆಯವ್ಯಯ ಮಂಡನೆ ವೇಳೆಯೇ ಇದನ್ನು ಘೋಷಿಸಲಾಗಿತ್ತು. ಆಗ ಸರ್ಕಾರ ತಾನೇ ಸ್ಥಾವರ ಸ್ಥಾಪಿಸುವುದಾಗಿ ಹೇಳಿತ್ತು. ನಂತರ ಹಿಂದೆ ಸರಿದ ಸರ್ಕಾರ ಯೋಜನೆಯನ್ನು ಗೌತಮ್ ಅದಾನಿಗೆ ಹಸ್ತಾಂತರಿಸಿದೆ’ ಎಂದೂ ದೂರಿದ್ದಾರೆ.
ರಾಜ್ಯದ ಹಣದಿಂದ ರಾಜ್ಯದ ನೆಲದಲ್ಲೇ ಸ್ಥಾಪನೆಯಾಗಲಿರುವ ಘಟಕದಲ್ಲಿ ಅದೇ ರಾಜ್ಯದ ಕಲ್ಲಿದ್ದಲು ಬಳಸಿ ಉತ್ಪಾದನೆ ಮಾಡುವ ವಿದ್ಯುತ್ ಅನ್ನು ಬಿಹಾರದ ಜನರಿಗೆ ಪ್ರತಿ ಯೂನಿಟ್‌ಗೆ ₹6.75 ರಂತೆ ಮಾರಾಟ ಮಾಡಲಾಗುತ್ತದೆ. ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಕ್ರಮವಾಗಿ ₹3 ಮತ್ತು ₹4 ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಬಿಹಾರದಲ್ಲಿ ‘ದುಪ್ಪಟ್ಟು ಲೂಟಿ’ ನಡೆಯುತ್ತಿದೆ ಎಂದೂ ಖೇರಾ ಕಿಡಿಕಾರಿದ್ದಾರೆ.
ಚುನಾವಣೆಯಲ್ಲಿ ಸೋಲುವ ಮುಂಚೆಯೇ ಯೋಜನೆಗಳನ್ನು ಅದಾನಿ ಕೈಗೆ ಒಪ್ಪಿಸುವ ಬಿಜೆಪಿಯ ತಂತ್ರಗಳ ದೊಡ್ಡ ಪಟ್ಟಿಯೇ ಇದೆ. ಮಹಾರಾಷ್ಟ್ರದಲ್ಲಿ ಚುನಾವಣೆಗೆ ಮುನ್ನ ವಿದ್ಯುತ್ ಸ್ಥಾವರ ಹಾಗೂ ಧಾರವಿ ಯೋಜನೆಯನ್ನು ಗೌತಮ್ ಅದಾನಿ ಅವರಿಗೆ ನೀಡಲಾಯಿತು. ಜಾರ್ಖಂಡ್ ಹಾಗೂ ಛತ್ತೀಸಗಢದಲ್ಲಿಯೂ ಅದೇ ರೀತಿ ಯೋಜನೆಗಳನ್ನು ಗೌತಮ್ ಅದಾನಿಗೆ ನೀಡಲಾಗಿದೆ ಎಂದು ಖೇರಾ ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ, ಬಿಹಾರ ಸರ್ಕಾರ ಹಾಗೂ ಅದಾನಿ ಸಮೂಹ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರೈತರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಅವರಿಂದ ಪೆನ್ಸಿಲ್ ಮೂಲಕ ಸಹಿ ಪಡೆದು ಅವರ ಭೂಮಿಯನ್ನು ಕಸಿದುಕೊಳ್ಳಲಾಗಿದೆ ಎಂದು ಖೇರಾ ಆರೋಪಿಸಿದ್ದಾರೆ. ಅಲ್ಲದೇ ‘ಏಕ್ ಪೇಡ್ ಮಾ ಕೆ ನಾಮ್’ (ಮಾತೆಯ ಹೆಸರಿನಲ್ಲಿ ಪಂದು ಗಿಡ) ಎನ್ನುವಂಥ ಅಭಿಯಾನಗಳನ್ನು ಮಾಡುವ ಬಿಜೆಪಿ ರೈತರು ತಾಯಿ ಎಂದು ಭಾವಿಸಿರುವ ಅದೇ ಭೂಮಿಯ ಮೌಲ್ಯವನ್ನು ಕೇವಲ ₹1 ಎಂದು ಪರಿಗಣಿಸುತ್ತದೆ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.