ಮರಾಟ ಮೀಸಲಾತಿ ಹೋರಾಟದ ವೇಳೆ ಮನೋಜ್ ಜರಾಂಗೆ ಹಾಗೂ ಬೆಂಬಲಿಗರು
ಪಿಟಿಐ ಚಿತ್ರ
ಮುಂಬೈ: 'ನಮಗೆ ಮೀಸಲಾತಿ ನೀಡಲು ನಿಮ್ಮಿಂದ ಆಗದಿದ್ದರೆ, ಗುಂಡಿಕ್ಕೆ ಸಾಯಿಸಿ'
ಮರಾಠ ಮೀಸಲಾತಿಗಾಗಿ ಒತ್ತಾಯಿಸಿ ಮನೋಜ್ ಜರಾಂಗೆ ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ನಾಂದೇಡ್ ರೈತ ಮಾರುತಿ ಪಾಟೀಲ ಅವರ ಆಕ್ರೋಶದ ಮಾತಿದು.
ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದ ಸಮೀಪ ಇರುವ ಆಜಾದ್ ಮೈದಾನದಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವ ಹೋರಾಟಗಾರರು, ಮೀಸಲಾತಿ ಸಿಗುವವರೆಗೆ ವಾಪಸ್ ತೆರಳುವುದಿಲ್ಲ ಎಂದು ಘೋಷಿಸಿದ್ದಾರೆ.
ಸತ್ಯಾಗ್ರಹ ಸ್ಥಳದಲ್ಲಿ ಗುರುವಾರ ರಾತ್ರಿ ಮಾತನಾಡಿರುವ ಪಾಟೀಲ, 'ಮೀಸಲಾತಿ ದೊರೆಯದಿದ್ದರೆ, ನಾವು ಬದಕಲು ಬಯಸುವುದಿಲ್ಲ. ಸರ್ಕಾರ ನಮ್ಮನ್ನು, ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ನಮ್ಮ ಬದುಕು ಎಷ್ಟು ದುಸ್ತರವಾಗಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ' ಎಂದು ಕಿಡಿಕಾರಿದ್ದಾರೆ.
ಪಾಟೀಲ ಸೇರಿದಂತೆ ಪ್ರತಿಭಟನಾಕಾರರು, ನಿರಂತರವಾಗಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಮರಗಳು, ಪಾದಚಾರಿ ಮಾರ್ಗ, ರೈಲ್ವೇ ನಿಲ್ದಾಣದ ಸುರಂಗ ಮಾರ್ಗವನ್ನು ಆಶ್ರಯಿಸಿದ್ದಾರೆ.
'ಸತ್ಯಾಗ್ರಹದಲ್ಲಿ ಪಾಲ್ಗೊಂಡಿರುವವರಿಗೆ ಆಶ್ರಯ ಕಲ್ಪಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲು ಸರ್ಕಾರ ತಲೆಕೆಡಿಸಿಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಎಲ್ಲವೂ ಕೆಸರುಮಯವಾಗಿದೆ' ಎಂದು ಪಾಟೀಲ ಬೇಸರ ವ್ಯಕ್ತಪಡಿಸಿದ್ದಾರೆ.
ಮೀಸಲಾತಿ ಹೋರಾಟಗಾರ ಜರಾಂಗೆ, ಇತರ ಹಿಂದುಳಿದ ವರ್ಗ (ಒಬಿಸಿ) ಕೆಟಗರಿಯಲ್ಲಿ ಮರಾಠರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.