ADVERTISEMENT

ಹೆತ್ತ ಮಗು ಹತ್ಯೆ: ಸುಚನಾ ಸೇಠ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಗೋವಾ ಪೊಲೀಸ್

ಹೆತ್ತ ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಚನಾ ಸೇಠ್‌ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ್ದಾರೆ.

ಪಿಟಿಐ
Published 3 ಏಪ್ರಿಲ್ 2024, 3:40 IST
Last Updated 3 ಏಪ್ರಿಲ್ 2024, 3:40 IST
<div class="paragraphs"><p>ಸುಚನಾ ಸೇಠ್‌</p></div>

ಸುಚನಾ ಸೇಠ್‌

   

ಪಣಜಿ: ಹೆತ್ತ ಮಗುವನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಚನಾ ಸೇಠ್‌ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್‌) ಸಲ್ಲಿಸಿದ್ದಾರೆ.

ಬೆಂಗಳೂರು ಮೂಲದ ‘ಮೈಂಡ್‌ಫುಲ್‌ ಎ.ಐ ಲ್ಯಾಬ್‌’ ಹೆಸರಿನ ಸ್ಟಾರ್ಟ್‌ಅಪ್ ಕಂಪನಿಯ ಸಿಇಒ 39 ವರ್ಷ ವಯಸ್ಸಿನ ಸುಚನಾ ಸೇಠ್‌ ಜನವರಿ 6ರಂದು ಗೋವಾದ ಹೋಟೆಲ್ ಒಂದರಲ್ಲಿ ತಮ್ಮ ನಾಲ್ಕು ವರ್ಷದ ಮಗು ಚಿನ್ಮಯ್‌ನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ADVERTISEMENT

ತನಿಖೆ ಪೂರ್ಣಗೊಂಡಿದ್ದು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಕೊಲೆ ಸಂಬಂಧ ಪಣಜಿ ಬಳಿಯ ಕಾಲಂಗೋಟ್ ಪೊಲೀಸ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

‘ಜನವರಿ 6ರ ರಾತ್ರಿ, ಹತ್ಯೆ ಮಾಡುವುದಕ್ಕೂ ಮುನ್ನ ಮಗುವಿಗೆ ಕೆಮ್ಮಿನ ಸಿರಪ್ ನೀಡಲಾಗಿತ್ತು. ಬಳಿಕ ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಲಾಗಿದೆ’ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 59 ಸಾಕ್ಷಿಗಳನ್ನು ಪರಿಗಣಿಸಲಾಗಿದ್ದು ಜೂನ್ 14 ರಂದು ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.

ಆರೋಪಿಯ ನಾಲ್ಕು ವರ್ಷದ ಮಗ ಚಿನ್ಮಯ್‌ನನ್ನು ಕೊಲೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ವೇಳೆ ಗೋವಾ ಪೊಲೀಸರ ಸೂಚನೆಯ ಮೇರೆಗೆ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದರು.

ಸದ್ಯ ಸುಚನಾ ಸೇಠ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಾಲಕನ ಅಂತ್ಯಕ್ರಿಯೆ ಅವರ ತಂದೆ ವೆಂಕಟರಮಣ್‌ ಅವರ ಸಮ್ಮುಖದಲ್ಲಿ ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಜನವರಿ 10ರಂದು ನಡೆದಿತ್ತು. ಸುಚನಾ ಸೇಠ್‌ ಹಾಗೂ ಅವರ ಗಂಡ ವೆಂಕಟರಮಣ್‌ ನಡುವೆ ಕೌಟುಂಬಿಕ ಕಲಹ ಇತ್ತು ಎಂದು ಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.