ADVERTISEMENT

ಕೇಂದ್ರ ಸರ್ಕಾರ ರೈತರನ್ನು ವಿಭಜಿಸುತ್ತಿದೆ: ರಾಕೇಶ್‌ ಟಿಕಾಯತ್‌

ಪಿಟಿಐ
Published 17 ಏಪ್ರಿಲ್ 2024, 14:39 IST
Last Updated 17 ಏಪ್ರಿಲ್ 2024, 14:39 IST
<div class="paragraphs"><p>ರಾಕೇಶ್‌ ಟಿಕಾಯತ್‌</p></div>

ರಾಕೇಶ್‌ ಟಿಕಾಯತ್‌

   

ನವದೆಹಲಿ: ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಅನ್ನು ಕೇಂದ್ರ ಸರ್ಕಾರವು ಯೋಜಿಸಿ ವಿಭಜಿಸಿದೆ ಎಂದು ಆರೋಪಿಸಿದ ರೈತ ಮುಖಂಡ ರಾಕೇಶ್‌ ಟಿಕಾಯತ್‌, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಎಸ್‌ಕೆಎಂ 2020–21ರಲ್ಲಿ ನಡೆದ ರೈತ ಆಂದೋಲನದ ನೇತೃತ್ವ ವಹಿಸಿತ್ತು. ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ರೈತರು ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ, ಗಾಜಿಪುರಗಳಲ್ಲಿ ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷಪೂರ್ತಿ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಕಾಯ್ದೆಗಳನ್ನು ಸರ್ಕಾರ ರದ್ದುಪಡಿಸಿತು.

ADVERTISEMENT

ದೆಹಲಿಯಿಂದ ತೆರಳಿದಾಗ ರೈತರು ಭಿನ್ನ ಹಾದಿಯಲ್ಲಿ ಸಾಗಿದರು. ಕೇಂದ್ರ ಸರ್ಕಾರವು ಮತ್ತೊಂದು ಸಂಘ ರಚಿಸಲು ಬಯಸಿ, ಅದರಂತೆಯೇ ಮಾಡಿತು ಎಂದು ಅವರು ದೂರಿದರು.

ಈ ವಿಭಜನೆಯು ಸಂಯುಕ್ತ ಕಿಸಾನ್‌ ಮೋರ್ಚಾ (ರಾಜಕೀಯೇತರ) ರಚನೆಗೆ ಕಾರಣವಾಯಿತು ಎಂದು ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ಟಿಕಾಯತ್‌ ತಿಳಿಸಿದರು. 

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮತ್ತು ಕೃಷಿ ಸಾಲ ಮನ್ನಾ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್‌ ಮಜ್ದೂರ್‌ ಮೋರ್ಚಾ (ಕೆಎಂಎಂ) ನಡೆಸುತ್ತಿರುವ ಪ್ರತಿಭಟನೆಯಲ್ಲಿ ಎಸ್‌ಕೆಎಂ ಭಾಗಿಯಾಗಿಲ್ಲ.

ರೈತರನ್ನು ಒಗ್ಗೂಡಿಸುವ ಉದ್ದೇಶದಿಂದ ಎಸ್‌ಕೆಎಂ ಅನ್ನು ರಚಿಸಲಾಯಿತು. ಕೃಷಿ ಕಾನೂನುಗಳ ವಿರುದ್ಧ ಹೋರಾಡಲು ಎಸ್‌ಕೆಎಂ ಬ್ಯಾನರ್ ಅಡಿಯಲ್ಲಿ 41 ಸಂಘಟನೆಗಳು ಒಗ್ಗೂಡಿದ್ದವು. ಈ ಹೋರಾಟದ ಬಳಿಕ ಕೇಂದ್ರ ಸರ್ಕಾರವು ಹೊಸ ರೈತ ಸಂಘಗಳನ್ನು ರಚಿಸುವ ಮೂಲಕ ರೈತರನ್ನು ವಿಭಜಿಸಿದೆ. ಇದು ಪಿತೂರಿಯ ಭಾಗವಾಗಿದೆ ಎಂದು ಟಿಕಾಯತ್‌ ಆರೋಪಿಸಿದರು.

ನೋಯ್ಡಾದಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ ಹೆಸರಿನಲ್ಲಿ 37 ರೈತ ಸಂಘಟನೆಗಳು ನೋಂದಣಿಯಾಗಿವೆ. ಇಂತಹ ಸಂಘಟನೆಗಳ ನೇತೃತ್ವವನ್ನು ಶಾಸಕರು ವಹಿಸುತ್ತಿದ್ದಾರೆ. ಜಾತಿ ಮತ್ತು ಕೃಷಿ ಬೆಳೆಗಳ ಆಧಾರದ ಮೇಲೆ ಈ ರೀತಿಯ ಸಂಘಟನೆಗಳನ್ನು ರಚಿಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 30ರಿಂದ 40 ಹೊಸ ಸಂಘಟನೆಗಳನ್ನು ನಿರ್ಮಿಸಿ, ಜನರನ್ನು ವಿಭಜಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರ ಷಡ್ಯಂತ್ರ ನಡೆಸುತ್ತಿದೆ ಎಂದು ದೂರಿದ ಅವರು, ‘ಸಂಯುಕ್ತ ಕಿಸಾನ್‌ ಮೋರ್ಚಾವನ್ನು ರಚಿಸಿದ್ದು ನಾವು. ನಮ್ಮ ಸಿದ್ಧಾಂತವನ್ನು ಒಪ್ಪುವವರು ಮೋರ್ಚಾ ಸೇರಿಕೊಳ್ಳುತ್ತಾರೆ‌’ ಎಂದು ಅವರು ಪ್ರತಿಕ್ರಿಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.